ಬೆಂಗಳೂರು: ಶ್ರೀರಾಮುಲು ಮತ್ತು 50 ಜನ ಬಿಜೆಪಿ ಶಾಸಕರನ್ನು ಸಂಪರ್ಕಿಸಿದ್ದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಶಾಸಕ ಜನಾರ್ಧನ ರೆಡ್ಡಿ(Janardhana Reddy) ಹಾಗೂ ಮಾಜಿ ಸಚಿವ ಶ್ರೀರಾಮುಲು(Sriramulu) ಸ್ನೇಹ ಬಿರುಕು ಬಿಟ್ಟಿದ್ದು, ಇಬ್ಬರು ಪರಸ್ಪರ ವಾಗ್ದಾಳಿ ನಡೆಸುತ್ತಿದ್ದಾರೆ. ಈ ವೇಳೆ ಶ್ರೀರಾಮುಲು ಅವರನ್ನು ಡಿಕೆಶಿ, ಕಾಂಗ್ರೆಸ್ ಗೆ ಸೆಳೆಯುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಈ ವಿಷಯವಾಗಿ ಮಾತನಾಡಿರುವ ಡಿಕೆಶಿ, ನಾನು ಶ್ರೀರಾಮುಲುಗೆ ಯಾವುದೇ ಆಹ್ವಾನ ನೀಡಿಲ್ಲ. ಆದರೆ, ರಾಮುಲುಗೆ ವಿಧಾನಸಭೆ ಚುನಾವಣೆಗೂ ಮೊದಲು ನಾನು ಪಕ್ಷಕ್ಕೆ ಬರಲು ಕೇಳಿದ್ದೆ. ಆಗ ಶ್ರೀರಾಮುಲು ಅವರು ನಾನು ಬಿಜೆಪಿಯಲ್ಲೇ ಇರುತ್ತೇನೆ ಎಂದು ಹೇಳಿದ್ದರು. ಆಗ ಶ್ರೀರಾಮುಲು ಮಾತ್ರವಲ್ಲ 50 ಶಾಸಕರನ್ನು ಕೂಡ ಸಂಪರ್ಕ ಮಾಡಿದ್ದೆ ಎಂದಿದ್ದಾರೆ.
ಜನಾರ್ಧನ ರೆಡ್ಡಿ ಬಾಯಿ ಚಪಲಕ್ಕೆ ಮಾತನಾಡುತ್ತಾರೆ. ಅದಕ್ಕೆ ನಾನು ಉತ್ತರ ಕೊಡುವುದಿಲ್ಲ. ಶ್ರೀರಾಮುಲು ಅವರನ್ನು ಡಿಕೆಶಿ ಸಂಪರ್ಕ ಮಾಡಿದ್ದಾರೆ ಎನ್ನುವ ಆರೋಪದಲ್ಲಿ ಹುರುಳಿಲ್ಲ. ಅವರು ಪಾರ್ಟಿಯಲ್ಲೇ ಇರಲಿಲ್ಲ. ಈಗ ಪಾರ್ಟಿಗೆ ಕಾಲಿಟ್ಟು ಮನೆ ಒಡೆಯೋ ಕೆಲಸ ಮಾಡುತ್ತಿದ್ದಾನೆ. ನಾನ್ಯಾಕೆ ಅವನನ್ನು ದೊಡ್ಡವನನ್ನಾಗಿ ಮಾಡಲಿ? ಅವನು ನನ್ನ ಹೆಸರು ತಗೊಂಡರೆ ನಾನು ದೊಡ್ಡವನಾಗುತ್ತೇನಾ? ಅವನು ಯಾರ ಸಂಪರ್ಕದಲ್ಲಿದ್ದ ಅಂತ ಚರ್ಚೆ ಬೇಡ. ನನ್ನ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾನೆ ಎಂದು ಏಕವಚನದಲ್ಲೇ ಗುಡುಗಿದ್ದಾರೆ.