- ಮುಂಬೈನಲ್ಲಿ 20ರ ಯುವತಿ ಮೇಲೆ ಅತ್ಯಾಚಾರ: ಆಟೋ ಚಾಲಕ ಬಂಧನ
ಮುಂಬೈ: 20 ವರ್ಷದ ಯುವತಿಯೊಬ್ಬಳ ಮೇಲೆ ಅತ್ಯಾಚಾರಗೈದ ಆರೋಪದಲ್ಲಿ ಮುಂಬೈನ ಆಟೋರಿಕ್ಷಾ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಈ ಪ್ರಕರಣವು ಹಲವು ಅನುಮಾನಗಳನ್ನು ಮೂಡಿಸಿದ್ದು, ಹೆಚ್ಚಿನ ವಿಚಾರಣೆ ಬಳಿಕವೇ ನಿಖರ ಮಾಹಿತಿ ಲಭ್ಯವಾಗಲಿದೆ ಎಂದು ಪೊಲೀಸರು ಹೇಳಿದ್ದಾರೆ. ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಮಂಗಳವಾರ ರಾತ್ರಿ ಸಂತ್ರಸ್ತ ಯುವತಿ ಪತ್ತೆಯಾಗಿದ್ದಳು. ಆಕೆಯ ಗುಪ್ತಾಂಗದೊಳಗೆ ಕಲ್ಲುಗಳು ಹಾಗೂ ಸರ್ಜಿಕಲ್ ಬ್ಲೇಡ್ ಕೂಡ ತುರುಕಿಸಿರುವುದು ಕಂಡುಬಂದ ಕಾರಣ, ವೈದ್ಯರು ಕೂಡಲೇ ಶಸ್ತ್ರಚಿಕಿತ್ಸೆ ಮಾಡಿ ಅವುಗಳನ್ನು ಹೊರತೆಗೆದಿದ್ದಾರೆ. ಯುವತಿಯು ತನ್ನ ಮೇಲೆ ಆಟೋ ಚಾಲಕ - ಅತ್ಯಾಚಾರಗೈದಿರುವುದಾಗಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾಳೆ. ಆದರೆ, ಪ್ರಾಥಮಿಕ ತನಿಖೆಯ ವೇಳೆ ಮತ್ತಷ್ಟು ಅಂಶಗಳು ಬಹಿರಂಗವಾಗಿದ್ದು, ಅತ್ಯಾಚಾರ ನಡೆದಿದೆ ಎಂದರೆ ಮನೆಯವರು ನಂಬುವುದಿಲ್ಲ ಎಂಬ ಕಾರಣಕ್ಕೆ ಆ ಯುವತಿಯೇ ತನ್ನ ಗುಪ್ತಾಂಗದೊಳಕ್ಕೆ ಕಲ್ಲುಗಳನ್ನು ಹಾಗೂ ಸರ್ಜಿಕಲ್ ಬ್ಲೇಡನ್ನು ತುರುಕಿಸಿಕೊಂಡಿದ್ದಾಳೆ ಎಂದು ಪೊಲೀಸರು ಅಂದಾಜಿಸಿದ್ದಾರೆ.
- ಯುವತಿಯು ಮುಂಬೈನ ನಲಸೋಪಾರಾ ನಿವಾಸಿ. ಪೊಲೀಸ್ ಮೂಲಗಳ ಪ್ರಕಾರ, ಯುವತಿ ಹಾಗೂ ಆಟೋ ಚಾಲಕ ಒಟ್ಟಿಗೆ ಅರ್ನಾಲಾ ಸಮುದ್ರತೀರಕ್ಕೆ ಹೋಗಿದ್ದರು. ಅಲ್ಲಿ ಹೋಟೆಲ್ ಕೊಠಡಿ ಬಾಡಿಗೆಗೆ ಪಡೆಯಲು ಪ್ರಯತ್ನಿಸಿದ್ದರಾದರೂ, ಆಕೆಯ ಬಳಿ ಐಡಿ ಕಾರ್ಡ್ ಇಲ್ಲದ ಕಾರಣ ಹೋಟೆಲ್‌ನವರು ರೂಂ ಬಾಡಿಗೆಗೆ ನೀಡಿರಲಿಲ್ಲ. ಹೀಗಾಗಿ, ಇಬ್ಬರೂ ರಾತ್ರಿವರೆಗೂ ಬೀಚ್ ಬಳಿಯೇ ಕಾಲ ಕಳೆದಿದ್ದರು. ಈ ಸಂದರ್ಭದಲ್ಲಿ ಆಟೋಚಾಲಕ ಆ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಅಲ್ಲಿಂದ ಪರಾರಿಯಾಗಿದ್ದಾನೆ. ಯುವತಿಯು ಹೇಗೋ ಕಷ್ಟಪಟ್ಟು ರೈಲು ನಿಲ್ದಾಣವನ್ನು ತಲುಪಿದ್ದಾಳೆ. ಆದರೆ, ಇಷ್ಟು ತಡರಾತ್ರಿ ಮನೆಗೆ ಹೋದರೆ ಹೆತ್ತವರು ಹೊಡೆಯಬಹುದು, ನನ್ನ ಮೇಲೆ ಅತ್ಯಾಚಾರ ಆಗಿದೆ ಎಂದರೆ ಯಾರೂ ನಂಬಲಿಕ್ಕಿಲ್ಲ ಎಂಬ ಆತಂಕ ಆಕೆಯನ್ನು ಕಾಡತೊಡಗಿದೆ. ಹೀಗಾಗಿ, ಆಕೆಯೇ ಸರ್ಜಿಕಲ್ ಬ್ಲೇಡನ್ನು ಖರೀದಿಸಿ, ಅದನ್ನು ಮತ್ತು ಸಣ್ಣ ಸಣ್ಣ ಕಲ್ಲುಗಳನ್ನು ತನ್ನ ಗುಪ್ತಾಂಗದೊಳಕ್ಕೆ ತೂರಿಸಿಕೊಂಡಿದ್ದಾಳೆ. ಈ ಮೂಲಕ ತನ್ನ ಮೇಲೆ ಘೋರ ಅತ್ಯಾಚಾರ ನಡೆದಿದೆ ಎಂಬಂತೆ ಬಿಂಬಿಸಿಕೊಳ್ಳಲು ಯತ್ನಿಸಿದ್ದಾಳೆ. ಆದರೆ, ಇದಾದ ಸ್ವಲ್ಪ ಹೊತ್ತಲ್ಲೇ ಆಕೆಯ ದೇಹದಲ್ಲಿ ರಕ್ತಸ್ರಾವ ಆರಂಭವಾಗಿದೆ. ಭಯಭೀತಳಾದ ಆಕೆ ಕೂಡಲೇ ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿ, ತನ್ನ ಮೇಲೆ ಅತ್ಯಾಚಾರವಾಗಿರುವುದಾಗಿ ದೂರು ನೀಡಿದ್ದಾಳೆ. ಅದರಂತೆ, ಆಟೋ ಚಾಲಕನನ್ನು ಬಂಧಿಸಲಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇನ್ನೊಂದೆಡೆ, ಯುವತಿಯು 2023ರಲ್ಲೂ ಮುಂಬೈನ ನಿರ್ಮಲ್ ನಗರ್ ಮತ್ತು ಶಿವಾಜಿ ನಗರದಲ್ಲಿ ತನ್ನ ಮೇಲೆ ಅತ್ಯಾಚಾರವಾಗಿದೆ ಎಂದು 2 ಬಾರಿ ದೂರು ನೀಡಿದ್ದಳು ಎಂದು ಸಂತ್ರಸ್ತೆಯ ತಂದೆ ಪೊಲೀಸರ ಮುಂದೆ ಹೇಳಿದ್ದಾರೆ. ಹೀಗಾಗಿ ಯುವತಿ ಮಾನಸಿಕ ಅಸ್ವಸ್ಥೆಯಾಗಿರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.