ಮುಂಬಯಿ: ಸ್ಪಿನ್ ಬೌಲರ್ ಯಜುವೇಂದ್ರ ಚಹಲ್(Yajuvendra Chahal) ಮತ್ತು ಪತ್ನಿ ಧನಶ್ರೀ ವರ್ಮಾ ದಾಂಪತ್ಯದ ಲಯ ತಪ್ಪಿದೆ ಎಂಬುದಾಗಿ ವರದಿಯಾಗಿದೆ. ಅವರಿಬ್ಬರೂ ಪ್ರತ್ಯೇಕ ವಾಸ ಶುರು ಮಾಡಿದ್ದಾರೆ ಎಂಬುದಾಗಿಯೂ ಹೇಳಲಾಗುತ್ತಿದೆ. ಧನಶ್ರೀ ದೊಡ್ಡ ಪ್ರಮಾಣದ ಪರಿಹಾರಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂಬುದೂ ಸುದ್ದಿ. ಆದರೆ, ಈ ವಿಚಾರದಲ್ಲಿ ಇಬ್ಬರೂ ಪ್ರತಿಕ್ರಿಯೆ ಕೊಟ್ಟಿಲ್ಲ. ಆದರೆ, ಚಹಲ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮಾರ್ಮಿಕ ಪೋಸ್ಟ್‌ಗಳನ್ನು ಮಾಡಿದ್ದಾರೆ. ಅವರು ಯಾರಿಗಾಗಿ ಈ ಪೋಸ್ಟ್ ಮಾಡಿದ್ದಾರೆ ಎಂಬುದು ಗೊತ್ತಿಲ್ಲ.
ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಚಹಲ್ ತಮ್ಮ ಹಲವು ಸ್ಟೈಲಿಶ್ ಲುಕ್‌ನ ಹಲವು ಫೋಟೊಗಳನ್ನು ಹಂಚಿಕೊಂಡಿದ್ದಾರೆ. ನಿಜವಾದ ಪ್ರೀತಿ ಬಲು ಅಪರೂಪ, ನನ್ನ ಹೆಸರೇ ಅಪರೂಪ (‘Real love is rare. Hi, my name is ‘Rare) ಎಂದು ಬರೆದುಕೊಂಡಿದ್ದಾರೆ. ಇದು ಯಾರನ್ನು ಉದ್ದೇಶಿದ್ದು ಎಂಬುದರ ವಿವರಣೆ ಇಲ್ಲ.
ಈ ಜೋಡಿಯ ಪ್ರಣಯ ಸರಿಯಾಗಿಲ್ಲ ಎಂಬುದಾಗಿ 2024ರ ಡಿಸೆಂಬರ್‌ನಲ್ಲಿಯೇ ಸುದ್ದಿಯಾಗಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ಇಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಅನ್ ಫಾಲೋ ಮಾಡಿಕೊಂಡಿದ್ದರು. ಅದರಲ್ಲೂ ಚಹಲ್ ಪತ್ನಿ ಧನಶ್ರೀ ಜತೆಗಿರುವ ಎಲ್ಲ ಫೋಟೊವನ್ನು ಕೂಡ ಡಿಲೀಟ್ ಮಾಡಿದ್ದಾರೆ. .
`ಇಷ್ಟೆಲ್ಲ ಬೆಳವಣಿಗೆ ನಡೆದಿದ್ದರೂ ಕೂಡ ಇದುವರೆಗೂ ಚಹಲ್ ಅಥವಾ ಧನಶ್ರೀ ವಿಚ್ಛೇದನದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ದಂಪತಿಗಳು ಸದ್ಯ ಪ್ರತ್ಯೇಕವಾಗಿ ತಮ್ಮ ಜೀವನ ಮುಂದುವರಿಸಲು ನಿರ್ಧರಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ.
ಡಾನ್ಸ್ ಕಲಿತು ಮದುವೆಯಾಗಿದ್ದರು
ಧನಶ್ರೀ ಮತ್ತು ಚಹಲ್ 2020ರ ಡಿಸೆಂಬರ್ 11ರಂದು ಮದುವೆಯಾಗಿದ್ದರು. ಚಹಲ್ ಲಾಕ್‌ಡೌನ್ ಸಮಯದಲ್ಲಿ ಧನಶ್ರೀ ಅವರಿಂದ ನೃತ್ಯ ಕಲಿಯಲು ಇಚ್ಛಿಸಿದ್ದರು. ಈ ಸಮಯದಲ್ಲಿ ಇಬ್ಬರ ನಡುವೆ ಆತ್ಮೀಯತೆ ಮೂಡಿ ಪ್ರೀತಿ ಶುರುವಾಗಿತ್ತು.
ಕಳೆದ ವರ್ಷ ನಡೆದಿದ್ದ ಐಪಿಎಲ್ ಮೆಗಾ ಹರಾಜಿನಲ್ಲಿ ಚಹಲ್18 ಕೋಟಿ ರೂ. ಪಡೆದು ಪಂಜಾಬ್ ಕಿಂಗ್ಸ್ ತಂಡದ ಪಾಲಾಗಿದ್ದರು. ಇದುವರೆಗೆ 160 ಐಪಿಎಲ್ ಪಂದ್ಯಗಳನ್ನಾಡಿ 205 ವಿಕೆಟ್ ಕಿತ್ತು ಟೂರ್ನಿಯಲ್ಲೇ ಅತ್ಯಧಿಕ ವಿಕೆಟ್ ಕಿತ್ತ ಬೌಲರ್ ಎನಿಸಿಕೊಂಡಿದ್ದಾರೆ. ಕಳೆದ ಆವೃತ್ತಿಯಲ್ಲಿ ರಾಜಸ್ಥಾನ್ ತಂಡದ ಪರ ಆಡಿದ್ದರು. ಇದುವರೆಗೆ ಭಾರತ ಪರ ಚಹಲ್ 72 ಏಕದಿನ ಪಂದ್ಯಗಳಿಂದ 121 ವಿಕೆಟ್, 80 ಟಿ20 ಆಡಿ 96 ವಿಕೆಟ್ ಕಬಳಿಸಿದ್ದಾರೆ.