ಬೆಂಗಳೂರು: 2019ರ ರಾಜ್ಯ ಪ್ರಶಸ್ತಿಗೆ ಕಿಚ್ಚ ಸುದೀಪ್ ಆಯ್ಕೆಯಾಗಿದ್ದರು. ಆದರೆ, ಪ್ರಶಸ್ತಿಯನ್ನು ಸುದೀಪ್ ತಿರಸ್ಕರಿಸಿದ್ದಾರೆ ಎಂದು ತಿಳಿದು ಬಂದಿದೆ.
‘ಪೈಲ್ವಾನ್’ ಸಿನಿಮಾಗಾಗಿ ನಟ ಕಿಚ್ಚ ಸುದೀಪ್ ಗೆ ರಾಜ್ಯ ಪ್ರಶಸ್ತಿ ಘೋಷಣೆಯಾಗಿತ್ತು. ಈ ಕುರಿತು ಟ್ವಿಟರ್ ಪೋಸ್ಟ್ ಮಾಡಿರುವ ಸುದೀಪ್, ಪೈಲ್ವಾನ್ ಚಿತ್ರದಲ್ಲಿನ ತಮ್ಮ ನಟನೆಯನ್ನು ಗುರುತಿಸಿದ್ದಕ್ಕಾಗಿ ಜ್ಯೂರಿಗಳಿಗೆ ಮತ್ತು ರಾಜ್ಯ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ. ಆದರೆ ತಮ್ಮ ಬದಲು ಬೇರೆ ಕಲಾವಿದರಿಗೆ ಈ ಪ್ರಶಸ್ತಿ ಸಲ್ಲಬೇಕು ಎಂದು ಸುದೀಪ್ ಮನವಿ ಮಾಡಿದ್ದಾರೆ.
‘ಅತ್ಯುತ್ತಮ ನಟ ವಿಭಾಗದಲ್ಲಿ ರಾಜ್ಯ ಪ್ರಶಸ್ತಿಯನ್ನು ಪಡೆದಿರುವುದು ನಿಜಕ್ಕೂ ಒಂದು ಸೌಭಾಗ್ಯ ಮತ್ತು ಈ ಗೌರವಕ್ಕಾಗಿ ಗೌರವಾನ್ವಿತ ತೀರ್ಪುಗಾರರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಆದಾಗ್ಯೂ, ನಾನು ಹಲವಾರು ವರ್ಷಗಳಿಂದ ಪ್ರಶಸ್ತಿಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಲು ನಾನು ನಿರ್ಧರಿಸಿದ್ದೇನೆ. ಅದಕ್ಕೆ ವಿವಿಧ ವೈಯಕ್ತಿಕ ಕಾರಣಗಳಿವೆ.’ ಈ ಕಲೆಗಾಗಿ ತಮ್ಮ ಹೃದಯವನ್ನು ಅರ್ಪಿಸಿದ ಅನೇಕ ಸಮರ್ಥ ನಟರು ಇದ್ದಾರೆ. ನನಗಿಂತಲೂ ಹೆಚ್ಚಾಗಿ ಅವರಿಗೆ ಈ ಗೌರವ ಸಲ್ಲಬೇಕು. ಅವರಲ್ಲಿ ಒಬ್ಬರು ಈ ಗೌರವ ಪಡೆದರೆ ನನಗೆ ಹೆಚ್ಚು ಖುಷಿ ಆಗುತ್ತದೆ. ಜನರನ್ನು ರಂಜಿಸಬೇಕು ಎಂಬ ನನ್ನ ಕೆಲಸದಲ್ಲಿ ಪ್ರಶಸ್ತಿಗಳ ನಿರೀಕ್ಷೆ ಇಲ್ಲ. ಜ್ಯೂರಿಗಳು ನನ್ನನ್ನು ಗುರುತಿಸಿರುವುದು ನನಗೆ ಇನ್ನಷ್ಟು ಉತ್ತೇಜನ ನೀಡಿದೆ.’ ಎಂದು ಬರೆದುಕೊಂಡಿದ್ದಾರೆ.
ನನ್ನನ್ನು ಆಯ್ಕೆ ಮಾಡಿದ್ದಕ್ಕೆ ಜ್ಯೂರಿಗಳಿಗೆ ನಾನು ಚಿರಋಣಿ. ಈ ಮನ್ನಣೆಯೇ ನಿಜವಾದ ಪ್ರಶಸ್ತಿ. ನನ್ನ ನಿರ್ಧಾರದಿಂದ ನಿರಾಸೆ ಆಗಿದ್ದರೆ ಜ್ಯೂರಿಗಳಿಗೆ ಮತ್ತು ರಾಜ್ಯ ಸರ್ಕಾರಕ್ಕೆ ನಾನು ಕ್ಷಮೆ ಕೇಳುತ್ತೇನೆ. ನನ್ನ ನಿರ್ಧಾರವನ್ನು ನೀವು ಗೌರವಿಸುತ್ತೀರಿ ಮತ್ತು ನನ್ನನ್ನು ಬೆಂಬಲಿಸುತ್ತೀರಿ ಎಂಬ ನಂಬಿಕೆ ನನಗೆ ಇದೆ. ಮತ್ತೊಮ್ಮೆ, ನನ್ನ ಕೆಲಸವನ್ನು ಗುರುತಿಸಿ ಈ ಪ್ರಶಸ್ತಿಗೆ ಪರಿಗಣಿಸಿದ್ದಕ್ಕಾಗಿ ತೀರ್ಪುಗಾರರ ಗೌರವಾನ್ವಿತ ಸದಸ್ಯರಿಗೆ ಮತ್ತು ರಾಜ್ಯ ಸರ್ಕಾರಕ್ಕೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ.’
ಇಂತಿ.. ಕಿಚ್ಚ ಸುದೀಪ ಎಂದು ಬರೆದುಕೊಂಡಿದ್ದಾರೆ.