ಬ್ಯಾಂಕಾಕ್: ಥಾಯ್ಲೆಂಡ್‌ನಲ್ಲಿ(Thailand) ಸಲಿಂಗ ವಿವಾಹ (Same-sex marriage )ಕಾನೂನು ಗುರುವಾರದಿಂದ ಜಾರಿಗೆ ಬಂದಿದ್ದು, ಸಾವಿರಾರು ಮಂದಿ ತೃತೀಯ ಲಿಂಗಿ(LGBTQ+)ಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನೂ ಅನೇಕ ದಂಪತಿಗಳು ಈವರೆಗೆ ರಹಸ್ಯವಾಗಿಟ್ಟಿದ್ದ ತಮ್ಮ ವೈವಾಹಿಕ ಸಂಬಂಧಗಳನ್ನು ಬಹಿರಂಗಗೊಳಿಸಿ, ಅದಕ್ಕೆ ಕಾನೂನು ಮಾನ್ಯತೆ ಪಡೆದುಕೊಂಡಿದ್ದಾರೆ. ವಿವಾಹ ಸಮಾನತೆ ಕಾಯ್ದೆಯನ್ನು ಜಾರಿ ಮಾಡುವ ಮೂಲಕ ಥಾಯ್ಲೆಂಡ್ ಈಗ ನೈರುತ್ಯ ಏಷ್ಯಾದಲ್ಲಿ ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಿದ ಮೊದಲ ದೇಶ ಮತ್ತು ಏಷ್ಯಾದ ಮೂರನೇ ದೇಶ ಎನಿಸಿಕೊಂಡಿದೆ. ಏಷ್ಯಾದಲ್ಲಿ ತೈವಾನ್ ಮತ್ತು ನೇಪಾಳ ಈಗಾಗಲೇ ಸಲಿಂಗ ವಿವಾಹಕ್ಕೆ ಕಾನೂನುಬದ್ಧ ಮಾನ್ಯತೆ ನೀಡಿವೆ.
ಈ ಕ್ರಾಂತಿಕಾರಿ ಕಾನೂನು ಅನುಷ್ಠಾನಗೊಂಡ ಮೊದಲೇ ದಿನವೇ ಥಾಯ್ಲೆಂಡ್‌ನ ಹಲವು ಹೈಪ್ರೊಫೈಲ್ ಸಲಿಂಗಿ ಜೋಡಿಗಳು (High profile same-sex couples) ಅಧಿಕೃತವಾಗಿ ವಿವಾಹ ಬಂಧಕ್ಕೊಳಗಾಗಿದ್ದಾರೆ.

ಇಲ್ಲಿನ ಖ್ಯಾತ ನಟರಾದ ಅಪಿವಾತ್ ಪೋರ್ಷ್ ಅಪಿವತ್ಸೈರೀ(49) ಮತ್ತು ಸಪ್ಪನ್ಯೂ ಆರ್ಮ್ ಪನತ್ಕೂಲ್(38) ವಿವಾಹದ ಉಡುಗೆ ಧರಿಸಿ ಬ್ಯಾಂಕಾಕ್ ರಿಜಿಸ್ಟ್ರಿ ಕಚೇರಿಯಲ್ಲಿ ವಿವಾಹವಾಗಿ, ತಮ್ಮ ಮದುವೆ ಪ್ರಮಾಣಪತ್ರದೊಂದಿಗೆ ತೆಗೆಸಿಕೊಂಡ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ವೇಳೆ ಇಬ್ಬರೂ ಭಾವುಕರಾಗಿರುವ ವಿಡಿಯೋ ಕೂಡ ಹರಿದಾಡುತ್ತಿವೆ. “ನಾವು ಈ ಒಂದು ದಿನಕ್ಕಾಗಿ ಹಲವು ದಶಕಗಳ ಕಾಲ ಹೋರಾಡಿದ್ದೇವೆ. ಇಂದಿನ ದಿನ ಸ್ಮರಣೀಯವಾಗಿರುತ್ತದೆ. ಪ್ರೇಮ ಎಂದರೆ ಪ್ರೇಮ ಅಷ್ಟೆ” ಎಂದು ಆರ್ಮ್ ಹೇಳಿದ್ದಾರೆ.
ಥಾಯ್ಲೆಂಡಲ್ಲಿ ಸಲಿಂಗ ವಿವಾಹ ಕಾನೂನು
ಕಳೆದ ವರ್ಷ(2024)ದ ಸೆಪ್ಟೆಂಬರ್ ನಲ್ಲಿ ಥಾಯ್ಲೆಂಡ್ ದೊರೆ ಮಹಾ ವಜೀರಲಾಂಗ್ ಕಾರ್ನ್ ಅವರು ದೇಶದಲ್ಲಿ ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡುವ ಕಾನೂನಿಗೆ ಒಪ್ಪಿಗೆಯ ಮುದ್ರೆಯೊತ್ತಿದ್ದರು. ಇದಾದ 120 ದಿನಗಳ ಬಳಿಕ ಕಾನೂನು ಜಾರಿಯಾಗಿದೆ. ಜಿಲ್ಲಾ ಕಚೇರಿಗಳಲ್ಲಿ ವಿವಾಹ ನೋಂದಣಿ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಗುರುವಾರ ಕೇಂದ್ರ ಬ್ಯಾಂಕಾಕ್ ವೊಂದರಲ್ಲೇ ಸುಮಾರು 300 ದಂಪತಿಗಳು ವಿವಾಹ ಪ್ರಮಾಣಪತ್ರ ಸ್ವೀಕರಿಸುವ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಈ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ.
ವಿವಾಹ ಸಮಾನತೆ ವಿಧೇಯಕವು ಥಾಯ್ಲೆಂಡ್ ಸಂಸತ್ ನ ಉಭಯ ಸದನಗಳಲ್ಲಿ ಅಂಗೀಕಾರಗೊಂಡಿವೆ. ಇದಕ್ಕಾಗಿ ನಾಗರಿಕ ಮತ್ತು ವಾಣಿಜ್ಯ ಸಂಹಿತೆಗೆ ತಿದ್ದುಪಡಿ ತಂದು, “ಪುರುಷ ಮತ್ತು ಮಹಿಳೆ” ಹಾಗೂ “ಪತಿ ಮತ್ತು ಪತ್ನಿ” ಎಂಬ ಪದಗಳನ್ನು ತೆಗೆದುಹಾಕಿ “ವ್ಯಕ್ತಿಗಳು” ಹಾಗೂ “ವೈವಾಹಿಕ ಪಾಲುದಾರರು” ಎಂದು ಬದಲಾಯಿಸಲಾಗಿದೆ. ಈ ಮೂಲಕ ತೃತೀಯ ಲಿಂಗಿಗಳಿಗೂ ದೇಶದಲ್ಲಿ ಸಂಪೂರ್ಣವಾದ ಕಾನೂನಾತ್ಮಕ, ಆರ್ಥಿಕ ಮತ್ತು ವೈದ್ಯಕೀಯ ಹಕ್ಕುಗಳನ್ನು ಕಲ್ಪಿಸಲಾಗಿದೆ. ವಿವಾಹ ಪ್ರಮಾಣ ಪತ್ರ ಪಡೆದ ಸಂಗಾತಿಗಳು ಅಥವಾ ದಂಪತಿಗಳು ಆಸ್ತಿಯಲ್ಲಿ ಪಾಲು, ತೆರಿಗೆ ಹೊಣೆಗಾರಿಕೆ, ತೆರಿಗೆ ಕಡಿತ, ಉತ್ತರಾಧಿಕಾರ ಹಕ್ಕುಗಳಲ್ಲಿ ಸಮಾನ ಜವಾಬ್ದಾರಿ ಮತ್ತು ಹಕ್ಕುಗಳನ್ನು ಹೊಂದಿರುತ್ತಾರೆ.
2001ರಲ್ಲಿ ಸಲಿಂಗ ವಿವಾಹಕ್ಕೆ ಅನುಮತಿ ನೀಡುವ ಮೂಲಕ ನೆದರ್ಲೆಂಡ್ಸ್ ಇಂಥದ್ದೊಂದು ಕ್ರಾಂತಿಕಾರಿ ಹೆಜ್ಜೆಯಿಟ್ಟ ಮೊದಲ ದೇಶ ಎನಿಸಿಕೊಂಡಿತು. ಅದಾದ ಬಳಿಕ 30ಕ್ಕೂ ಹೆಚ್ಚು ರಾಷ್ಟ್ರಗಳು ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಿದವು.