ಮುಂಬೈ: ಕಾಮಿಡಿಯನ್ ಕಪಿಲ್ ಶರ್ಮಾ(Kapil Sharma) , ಸುಗಂಧ ಮಿಶ್ರಾ, ನಟ ರಾಜ್‌ಪಾಲ್ ಯಾದವ್(Rajpal Yadav) ಮತ್ತು ಕೊರಿಯೋಗ್ರಾಫರ್ ರೆಮೋ ಡಿಸೋಜಾ (Remo D’Souza) ಅವರು ತಮಗೆ ಜೀವ ಬೆದರಿಕೆ ಬಂದಿರುವುದಾಗಿ ಪೊಲೀಸರಿಗೆ(police) ಗುರುವಾರ ದೂರು ನೀಡಿದ್ದಾರೆ. ಪಾಕಿಸ್ತಾನದಿಂದ ಇಮೇಲ್ ಮೂಲಕ ಈ ಸೆಲೆಬ್ರಿಟಿಗಳಿಗೆ ಕೊಲೆ ಬೆದರಿಕೆ ಹಾಕಲಾಗಿದೆ. ಇತ್ತೀಚೆಗೆ ‘ವಿಷ್ಣು’ ಎಂಬ ವ್ಯಕ್ತಿಯ ಹೆಸರಲ್ಲಿ ಇಮೇಲ್ ಬಂದಿದ್ದು, ನಾನು ನಿಮ್ಮೆಲ್ಲರ ಚಲನವಲನಗಳನ್ನು ಗಮನಿಸುತ್ತಿದ್ದೇನೆ ಎಂದೂ ಆ ವ್ಯಕ್ತಿ ಸಂದೇಶದಲ್ಲಿ ತಿಳಿಸಿದ್ದಾನೆ ಎನ್ನಲಾಗಿದೆ.
“ನಾವು ನಿಮ್ಮ ಇತ್ತೀಚೆಗಿನ ಎಲ್ಲ ಚಲನವಲನಗಳನ್ನು ಅವಲೋಕಿಸುತ್ತಿದ್ದೇವೆ. ಇದೊಂದು ಸೂಕ್ಷ್ಮ ವಿಚಾರ, ಇದನ್ನು ನಿಮ್ಮ ಗಮನಕ್ಕೆ ತರುವುದು ಅಗತ್ಯವಿದೆ ಎಂದು ನಾವು ಭಾವಿಸುತ್ತೇವೆ. ಇದೇನೂ ಪಬ್ಲಿಸಿಟಿ ಸ್ಟಂಟ್(publicity stunt) ಅಲ್ಲ ಅಥವಾ ನಿಮಗೆ ಕಿರುಕುಳ ನೀಡುವ ಪ್ರಯತ್ನವೂ ಅಲ್ಲ. ಈ ಸಂದೇಶವನ್ನು ನೀವು ಗಂಭೀರವಾಗಿ ಪರಿಗಣಿಸಿ, ಇದರ ಗೌಪ್ಯತೆಯನ್ನು ಕಾಪಾಡಿಕೊಳ್ಳಿ ಎಂದು ನಾವು ಕಳಿಕೊಳ್ಳುತ್ತೇವೆ” ಎಂದು ಇಮೇಲ್ ಸಂದೇಶದಲ್ಲಿ ಬರೆಯಲಾಗಿದೆ. ಜೊತೆಗೆ, “8 ಗಂಟೆಗಳೊಳಗಾಗಿ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ, ಪರಿಣಾಮ ನೆಟ್ಟಗಿರುವುದಿಲ್ಲ.
ಪಾಯಕಾರಿ ಪರಿಣಾಮಗಳನ್ನು ನೀವು ಎದುರಿಸಬೇಕಾಗುತ್ತದೆ” ಎಂದೂ ಬರೆಯಲಾಗಿದೆ. ಆದರೆ, ಸಂದೇಶ ಕಳುಹಿಸಿದವರ ಬೇಡಿಕೆಯೇನು ಎಂಬ ವಿವರಗಳು ಇನ್ನೂ ಬಹಿರಂಗವಾಗಿಲ್ಲ.
ರಾಜ್ ಪಾಲ್ ಯಾದವ್ ಅವರ ಪತ್ನಿ ನೀಡಿರುವ ದೂರಿನ ಆಧಾರದಲ್ಲಿ ಅಂಬೋಲಿ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ಇನ್ನೊಂದೆಡೆ, ಸುಗಂಧಾ ಮಿಶ್ರಾ ಹಾಗೂ ರೆಮೋ ಡಿಸೋಜಾ ಅವರೂ ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ.