ವಾಷಿಂಗ್ಟನ್: ಇನ್ನು ಮುಂದೆ ತಮ್ಮ ದೇಶದಲ್ಲಿ ಅಮೆರಿಕೇತರ ಹಾಗೂ ವಿದೇಶಿ ನಾಗರಿಕರಿಗೆ ಹುಟ್ಟುವ ಮಕ್ಕಳಿಗೆ ಜನ್ಮಸಿದ್ಧ ಪೌರತ್ವ ಹಕ್ಕು ಲಭಿಸುವುದಿಲ್ಲ ಎಂಬ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಆದೇಶಕ್ಕೆ ಅಮೆರಿಕದಲ್ಲಿರುವ ಭಾರತೀಯ ಮೂಲದ ಸಂಸದರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಜನ್ಮಸಿದ್ಧ ಪೌರತ್ವ ಹಕ್ಕು ಕಾನೂನು ರದ್ದು ನಿರ್ಧಾರದಿಂದ ದೇಶಕ್ಕೆ ಬರುವ ವಿದ್ಯಾರ್ಥಿಗಳು ಹಾಗೂ ವೃತ್ತಿಪರರ ಮೇಲೂ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಇಂಡೋ-ಅಮೆರಿಕ ಸಂಸದರು ಅಭಿಪ್ರಾಯಪಟ್ಟಿದ್ದು, ಟ್ರಂಪ್ ನಿರ್ಧಾರ ಸರಿಯಿಲ್ಲ ಎಂದಿದ್ದಾರೆ.
‘ಇದೊಂದು ಅಸಾಂವಿಧಾನಿಕ ನಡೆ. ಅಧ್ಯಕ್ಷರು ಒಂದು ಸಹಿ ಹಾಕಿದರು ಎಂದಾಕ್ಷಣ ಆ ಅಸಾಂವಿಧಾನಿಕವಾದ ನಿರ್ಧಾರವನ್ನು ಒಪ್ಪಿಕೊಳ್ಳಲು ಆಗದು. ಇದು ನಮ್ಮ ದೇಶದ ಕಾನೂನು ಹಾಗೂ ಸಂವಿಧಾನದಲ್ಲಿ ಉಲ್ಲೇಖಿಸಲಾದ ನಿಯಮಗಳನ್ನು ಅಣಕಿಸಿದಂತೆ’ ಎಂದು ಅಮೆರಿಕದಲ್ಲಿರುವ ಭಾರತ ಮೂಲದ ಸಂಸದೆ ಪ್ರಮೀಳಾ ಜಯಪಾಲ್ ಕಿಡಿಕಾರಿದ್ದಾರೆ.
‘ಜನನದಿಂದಲೇ ಸಿಗುವ ಪೌರತ್ವ ನಿಯಮವನ್ನು ವಿಶೇಷಾದೇಶದ ಮೂಲಕ ರದ್ದು ಮಾಡಿದ ಟ್ರಂಪ್ ನಿರ್ಧಾರವು ಅಕ್ರಮ ವಲಸಿಗರ ಮಕ್ಕಳಿಗೆ ಮಾತ್ರವಲ್ಲದೆ, ಎಚ್–1ಬಿ ವೀಸಾ ಹೊಂದಿರುವ ವೃತ್ತಿಪರರ ಮೇಲೂ ಪ್ರತಿಕೂಲ ಪರಿಣಾಮ ಬೀರಲಿದೆ’ ಎಂದು ಭಾರತ ಮೂಲದ ಅಮೆರಿಕ ಸಂಸದ ರೋ ಖನ್ನಾ ಆತಂಕ ವ್ಯಕ್ತಪಡಿಸಿದ್ದಾರೆ.
‘ಹುಟ್ಟಿನಿಂದ ಸಿಗುವ ಪೌರತ್ವದ ಹಕ್ಕು ಎನ್ನುವುದು ಈ ನೆಲದ ಕಾನೂನು. ಅದನ್ನು ಉಳಿಸಿಕೊಳ್ಳಲು ಯಾವ ಬೆಲೆ ತೆರಲೂ ನಾವು ಸಿದ್ಧರಿದ್ದೇವೆ. ಇಲ್ಲಿ ಟ್ರಂಪ್ ಅಭಿಪ್ರಾಯ ಲೆಕ್ಕಕ್ಕೆ ಬರುವುದಿಲ್ಲ’ ಎಂದು ಭಾರತ ಮೂಲದ ಮತ್ತೊಬ್ಬ ಸಂಸದ ಶ್ರೀ ಥಾಣೆದಾರ್ ಹೇಳಿದ್ದಾರೆ.
ಇದೇ ವೇಳೆ ಅಮೆರಿಕದಲ್ಲಿರುವ ವಲಸಿಗರ ಹಕ್ಕು ಸಂರಕ್ಷಣಾ ಸಂಘ, ಟ್ರಂಪ್ ಸಹಿ ಮಾಡಿರುವ ಜನ್ಮಸಿದ್ಧ ಪೌರತ್ವ ರದ್ದು ಆದೇಶವನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದೆ. 22 ರಾಜ್ಯಗಳ ಅಟಾರ್ನಿ ಜನರಲ್‌ಗಳು ಕೂಡ ಈ ಆದೇಶಕ್ಕೆ ತಡೆಯಾಜ್ಞೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅಮೆರಿಕದ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಟ್ರಂಪ್ ಅವರು ಹಲವು ಮಹತ್ವದ ಆದೇಶಗಳಿಗೆ ಸಹಿ ಹಾಕಿದ್ದರು. ಈ ಆದೇಶಗಳಲ್ಲಿ ಜನ್ಮಸಿದ್ಧ ಪೌರತ್ವ ಹಕ್ಕು ರದ್ದು, ಅಕ್ರಮ ವಲಸಿಗರಿಗೆ ಗೇಟ್ ಪಾಸ್, ಮೆಕ್ಸಿಕೋ ಗಡಿಯಲ್ಲಿ ಸೇನೆ ನಿಯೋಜನೆ, ದಕ್ಷಿಣದ ಗಡಿಗೆ ಬೇಲಿ ಹಾಕುವುದು ಸೇರಿದಂತೆ ಹಲವು ಮಹತ್ವದ ನಿರ್ಣಯಗಳೂ ಇದ್ದವು. ಇವುಗಳು ಈಗ ಅಮೆರಿಕ ಮಾತ್ರವಲ್ಲದೆ ವಿಶ್ವಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ.