ಕೊಡಗು: ಇತ್ತೀಚೆಗೆ ಫೈನಾನ್ಸ್ ಗಳ ಕಿರುಕುಳ ಹೆಚ್ಚಾಗುತ್ತಿರುವ ಘಟನೆ ರಾಜ್ಯದಲ್ಲಿ ಬೆಳಕಿಗೆ ಬರುತ್ತಿವೆ. ರಾಮನಗರದಲ್ಲಿ ಮಹಿಳೆಯೊಬ್ಬರು ಫೈನಾನ್ಸ್ ಗಳ ಉಪಟಳ ತಾಳಲಾರದೆ ಮಂಗಳವಾರವಷ್ಟೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈಗ ಇಡೀ ಗ್ರಾಮಕ್ಕೆ ಗ್ರಾಮವೇ ಊರು ತೊರೆದಿರುವ ಘಟನೆ ಬೆಳಕಿಗೆ ಬಂದಿದೆ.
ಕುಶಾಲನಗರ ತಾಲೂಕಿನ ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯಲ್ಲಿನ ಜನರು ಫೈನಾನ್ಸ್ ಗಳಿಂದ ಸಾಲ ಪಡೆದು ಮರುಪಾವತಿಸಲು ಸಾಧ್ಯವಾಗದೆ ಕಿರುಕುಳದಿಂದ ಬೇಸತ್ತು ಊರು ಬಿಟ್ಟಿದ್ದಾರೆ. ಈ ಕುರಿತು ಪರಿಶೀಲಿಸಿ ನೊಂದವರಿಗೆ ನ್ಯಾಯ ಕೊಡಿಸಬೇಕೆಂದು ಗ್ರಾಪಂ ವತಿಯಿಂದ ತಹಸೀಲ್ದಾರ್ ಗೆ ಮನವಿ ಸಲ್ಲಿಸಲಾಗಿದೆ.
‘ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಗೊಳಪಡುವ ಮೀನುಕೊಲ್ಲಿ ಹಾಡಿ, ದಾಸವಾಳ ಪೈಸಾರಿ, ಬೆಳ್ಳಿ ಪ್ರದೇಶಗಳ ಹಲವಾರು ಜನ ಕೂಲಿ ಕಾರ್ಮಿಕರು, ಹಣಕಾಸು ಸಂಸ್ಥೆಗಳಿಂದ ಸಾಲು ಪಡೆದು ಮರು ಪಾವತಿಸಲು ಆಗದೆ ಊರು ತೊರೆದಿದ್ದಾರೆ. ಸ್ಥಳೀಯ ಸಹಕಾರ ಸಂಘಗಳಿಂದ ಸಾಲ ನೀಡುವಾಗ ಕನಿಷ್ಠ ಮೂವರ ಜಾಮೀನು ಪಡೆದು ಸಾಲ ನೀಡಲಾಗುತ್ತದೆ. ಆದರೆ, ಖಾಸಗಿ ಸಂಸ್ಥೆಗಳು ಸಾಲಗಾರರು ಸಾಲ ಮರುಪಾವತಿಸಲು ಶಕ್ತರಿದ್ದಾರೆಯೇ ಎಂಬುವುದನ್ನು ಪರಿಗಣಿಸದೆ ಕೇವಲ ಆಧಾರ್ ಕಾರ್ಡ್ ಆಧರಿಸಿ ಲಕ್ಷಾಂತರ ರೂ. ಸಾಲ ನೀಡಿವೆ. ಇಂತಹ ಹಲವು ಸಂಸ್ಥೆಗಳಿಂದ ಸಾಲ ಪಡೆದವರು, ಈಗ ಊರು ತೊರೆದಿದ್ದಾರೆ ಎನ್ನಲಾಗಿದೆ.
ಕಿರುಕುಳದಿಂದಾಗಿ ಭಯಭೀತರಾದ ಹಲವು ಮಹಿಳೆಯರು ಮನೆ ತೊರೆದು ನೆರೆ ರಾಜ್ಯಕ್ಕೆ ವಲಸೆ ಹೋಗಿದ್ದಾರೆ. ಹೀಗಾಗಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಡಳಿತಕ್ಕೆ ಸಾರ್ವಜನಿಕರು ಮನವಿ ಮಾಡಿದ್ದಾರೆ.