ಬೆಂಗಳೂರು: ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಪಘಾತದ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರು, ಕಿತ್ತೂರಿನ ಬಳಿ ಅಪಘಾತಕ್ಕೀಡಾಗಿತ್ತು. ಈಗ ಸಚಿವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಮುಗಿದ ನಂತರ, ಲಕ್ಷ್ಮೀ ಹೆಬ್ಬಾಳ್ಕರ್ ಬೆಳಗಾವಿಗೆ ಪ್ರಯಾಣಿಸುತ್ತಿದ್ದರು. ಬೆಳಗಾವಿಗೆ ವಿಮಾನ ಸೌಲಭ್ಯವಿದ್ದರೂ, ಸರ್ಕಾರದ ಕಾರ ಇದ್ದರು ಖಾಸಗಿ ಕಾರಿನಲ್ಲಿ ಪ್ರಯಾಣಿಸಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ, ಅವರು ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.
ಸಚಿವರಿಗೆ ಸರ್ಕಾರ ಕಾರು ಕೊಟ್ಟಿದೆ. ಗನ್ ಮ್ಯಾನ್ ಕೊಟ್ಟಿದ್ದಾರೆ. ಎಸ್ಕಾರ್ಟ್ ನೀಡಲಾಗಿದೆ. ಆದರೆ, ಇದನ್ನೆಲ್ಲ ಬಿಟ್ಟು ಖಾಸಗಿ ಕಾರಿನಲ್ಲಿ ಸಚಿವರು ಹೋಗಿದ್ದೇಕೆ? ಎಂದು ಪ್ರಶ್ನಿಸಿದ್ದಾರೆ,.
ಘಟನೆ ಸಂದರ್ಭದಲ್ಲಿ ಕಾರಿನಲ್ಲಿ ಯಾರಿದ್ದರು? ಕಾರಿನಲ್ಲಿ ಏನನ್ನು ತೆಗೆದುಕೊಂಡು ಹೋಗುತ್ತಿದ್ದರು? ಡ್ರೈವರ್ ಎಲ್ಲಿ ಇದ್ದಾರೆ? ಒಮ್ಮೆ ನಾಯಿ ಅಡ್ಡ ಬಂತು ಎಂತಾ ಹೇಳಿದ್ದಾರೆ. ಮತ್ತೊಮ್ಮೆ ಹಿಂಬದಿಯಿಂದ ಯಾರೋ ಗುದ್ದಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೇ, ಡ್ರೈವರ್ ನಿದ್ದೆಗೆ ಜಾರಿದ್ದ ಎಂದು ಕೂಡ ಹೇಳಿದ್ದಾರೆ. ಆದರೆ, ನಿಜವಾದ ಸಂಗತಿ ಏನು ಎಂಬುವುದನ್ನು ಸ್ಪಷ್ಟಪಡಿಸಬೇಕು ಎಂದಿರುವ ಅವರು, ಕಾರಿನಲ್ಲಿ ಹಣ ಸಾಗಿಸುತ್ತಿದ್ದ ಹಿನ್ನೆಲೆಯಲ್ಲಿ ಎಲ್ಲವೂ ಇದ್ದರೂ ಖಾಸಗಿ ಕಾರಿನಲ್ಲಿ ಹೋಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ ಎಂದು ಆರೋಪಿಸಿದ್ದಾರೆ.