ನವದೆಹಲಿ: ಛತ್ತೀಸ್‌ಗಢದಲ್ಲಿ ಭದ್ರತಾ ಪಡೆಗಳಿಗೆ ಅತಿದೊಡ್ಡ ಯಶಸ್ಸು ಎಂಬಂತೆ, ಸೋಮವಾರ ತಡರಾತ್ರಿ ನಡೆದ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ 14 ಮಂದಿ ನಕ್ಸಲರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ. ಹತ ನಕ್ಸಲರ ಪೈಕಿ 1 ಕೋಟಿ ರೂ.ಗಳ ಬಹುಮಾನ ಹೊತ್ತಿದ್ದ ಮಾವೋವಾದಿ ಕೇಂದ್ರ ಕಮಿಟಿ ಸದಸ್ಯ ಜಯರಾಮ್ ಅಲಿಯಾಸ್ ಛಲಪತಿಯೂ ಒಬ್ಬ ಎಂದು ಅಧಿಕಾರಿಗಳು ತಿಳಿಸಿದ್ದಾರೆ
ಛತ್ತೀಸ್‌ಗಢ-ಒಡಿಶಾ ಗಡಿಯಲ್ಲಿ ಬರುವ ಗರಿಯಾಬಂದ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಈ ಎನ್‌ಕೌಂಟರ್ ನಡೆದಿದೆ. ಜಿಲ್ಲಾ ಮೀಸಲು ಪಡೆ(ಡಿಆರ್‌ಜಿ), ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್‌ಪಿಎಫ್), ಛತ್ತೀಸ್‌ಗಢದ ಕೋಬ್ರಾ ಮತ್ತು ಒಡಿಶಾದ ವಿಶೇಷ ಕಾರ್ಯಾಚರಣಾ ಪಡೆಗಳ ಜಂಟಿ ಆಪರೇಷನ್ ಇದಾಗಿತ್ತು. ಸೋಮವಾರ ತಡರಾತ್ರಿ ಆರಂಭವಾದ ಗುಂಡಿನ ಚಕಮಕಿ ಮಂಗಳವಾರ ಮುಂಜಾನೆಯವರೆಗೂ ಮುಂದುವರಿದಿತ್ತು.
ಒಡಿಶಾದ ನುವಾಪದಾ ಜಿಲ್ಲೆಯ ಗಡಿಯಿಂದ ಕೇವಲ 5 ಕಿ.ಮೀ. ದೂರದಲ್ಲಿರುವ ಕುಲಾರಿಘಾಟ್ ಮೀಸಲು ಅರಣ್ಯದಲ್ಲಿ ನಕ್ಸಲರು ಇರುವ ಬಗ್ಗೆ ಗುಪ್ತಚರ ಮಾಹಿತಿ ಆಧರಿಸಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಗುಂಡಿನ ಚಕಮಕಿ ಆರಂಭವಾಗಿದ್ದು, ಕೊನೆಗೆ ಜಯರಾಮ್ ಸೇರಿದಂತೆ 14 ಮಂದಿ ನಕ್ಸಲರನ್ನು ಹತ್ಯೆಗೈಯ್ಯಲಾಯಿತು. ಹತ ನಕ್ಸಲರ ಬಳಿಯಿದ್ದ ಸೆಲ್ಫ್-ಲೋಡಿಂಗ್ ರೈಫಲ್, (Self-loading rifle) ಸುಧಾರಿತ ಸ್ಫೋಟಕಗಳು ಸೇರಿದಂತೆ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಎನ್ ಕೌಂಟರ್ ಸ್ಥಳದಲ್ಲಿ ಶೋಧ ಕಾರ್ಯ ಮುಂದುವರಿದಿದೆ.
ಅಮಿತ್ ಶಾ ಪ್ರತಿಕ್ರಿಯೆ:
2026ರ ಮಾರ್ಚ್‌ನೊಳಗಾಗಿ ದೇಶವನ್ನು ನಕ್ಸಲ್ ಮುಕ್ತರನ್ನಾಗಿಸುತ್ತೇವೆ ಎಂದು ಈಗಾಗಲೇ ಶಪಥ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ಅವರು ಈ ಕಾರ್ಯಾಚರಣೆ ಬಗ್ಗೆ ಪ್ರತಿಕ್ರಿಯಿಸಿ, “ನಕ್ಸಲರಿಗೆ ಮತ್ತೊಂದು ದೊಡ್ಡ ಪೆಟ್ಟು” ಎಂದು ಬಣ್ಣಿಸಿದ್ದಾರೆ. ನಕ್ಸಲ್ ಮುಕ್ತ ಭಾರತವನ್ನು ನಿರ್ಮಿಸುವ ನಿಟ್ಟಿನಲ್ಲಿ ನಮ್ಮ ಭದ್ರತಾ ಪಡೆಗಳು ಅತಿದೊಡ್ಡ ಯಶಸ್ಸನ್ನು ಸಾಧಿಸಿದೆ. ಒಡಿಶಾ- ಛತ್ತೀಸ್ ಗಢ ಗಡಿಯಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ 14 ನಕ್ಸಲರನ್ನು ಹೊಡೆದುರುಳಿಸಿದೆ ಎಂದು ಅಮಿತ್ ಶಾ ಟ್ವೀಟರ್ ನಲ್ಲಿ ಪೋಸ್ಟ್ ಹಾಕಿದ್ದಾರೆ.
ಕಳೆದ ವರ್ಷ 200 ನಕ್ಸಲರ ಹತ್ಯೆ
ಕಳೆದ ವರ್ಷ ಅಂದರೆ 2024ರಲ್ಲಿ ಭದ್ರತಾ ಪಡೆಗಳು ಛತ್ತೀಸ್‌ಗಢವೊಂದರಲ್ಲೇ 200ಕ್ಕೂ ಅಧಿಕ ನಕ್ಸಲರನ್ನು ಹತ್ಯೆಗೈದಿವೆ. ಒಟ್ಟು 219 ನಕ್ಸಲರು ಹತರಾಗಿದ್ದು, ಈ ಪೈಕಿ ಬಸ್ತಾರ್ ಪ್ರದೇಶವೊಂದರಲ್ಲೇ 217 ಮಂದಿಯನ್ನು ಕೊಲ್ಲಲಾಗಿದೆ. ಇದರ ಜೊತೆಗೆ, 800 ಮಾವೋವಾದಿಗಳನ್ನು ಬಂಧಿಸಲಾಗಿದೆ. ಸುಮಾರು 802 ಮಂದಿ ಶಸ್ತ್ರತ್ಯಾಗ ಮಾಡಿ ಶರಣಾಗಿದ್ದಾರೆ. ನಕ್ಸಲ್ ನಿಗ್ರಹ ಕಾರ್ಯಾಚರಣೆ ವೇಳೆ 18 ಮಂದಿ ಭದ್ರತಾ ಪಡೆ ಸಿಬ್ಬಂದಿ ಹುತಾತ್ಮರಾಗಿದ್ದು, 65 ನಾಗರಿಕರು ಕೂಡ ಮೃತಪಟ್ಟಿದ್ದಾರೆ.