ಬೆಂಗಳೂರು: ಕಳೆದ ವರ್ಷ ಟ್ರಿನಿಟಿ ನಿಲ್ದಾಣದಲ್ಲಿ ತಾಯಿಯೊಬ್ಬರು ಮಗುವಿಗೆ ಹಾಲುಣಿಸಲು ಪರದಾಡಿದ ವಿಡಿಯೋವೊಂದು ಈಗ ವೈರಲ್ ಆಗಿದ್ದು, ಇದರ ಬೆನ್ನಲ್ಲೇ ಬಿಎಂಆರ್ ಸಿಎಲ್ ಎಚ್ಚೆತ್ತುಕೊಂಡಿದೆ.
ಮೆಟ್ರೋ ನಿಲ್ದಾಣಗಳಲ್ಲಿ ಶಿಶು ಸ್ತನ್ಯಪಾನ ಕೇಂದ್ರಗಳಿಗೆ ಬಿಎಂಆರ್ ಸಿಎಲ್ ಚಾಲನೆ ನೀಡಿದೆ. ಮೊದಲ ಹಂತದಲ್ಲಿ 5 ಮೆಟ್ರೋ ನಿಲ್ದಾಣಗಳಲ್ಲಿ ಶಿಶು ಸ್ತನ್ಯಪಾನ ಕೇಂದ್ರ ಆರಂಭ ಮಾಡಲಾಗಿದೆ.
BMRCL ಚೈಲ್ಡ್ ಹೆಲ್ತ್ ಫೌಂಡೇಶನ್, ಸಿಬ್ಡಿ ಸ್ವಾವಲಂಬನ್ ಫೌಂಡೇಶನ್ ಸಹಯೋಗದೊಂದಿಗೆ ಸ್ತನ್ಯಪಾನ ಕೇಂದ್ರ ಸ್ಥಾಪನೆ ಮಾಡಲಾಗಿದೆ. ಬೈಯಪ್ಪನಹಳ್ಳಿ, ಮೆಜೆಸ್ಟಿಕ್, ಯಶವಂತಪುರ, ಕೆಂಗೇರಿ ಮತ್ತು ಯಲಚೇನಹಳ್ಳಿ ನಿಲ್ದಾಣಗಳಲ್ಲಿ ಕೇಂದ್ರ ಆರಂಭವಾಗಿದೆ.
ಸದ್ಯ 8×8 ಅಡಿಯ ಕೊಠಡಿ ನಿರ್ಮಾಣ ಮಾಡಲಾಗಿದ್ದು. ಒಂದೇ ಸಮಯಕ್ಕೆ ನಾಲ್ವರು ತಾಯಂದಿರು ಕುಳಿತು ಮಕ್ಕಳಿಗೆ ಹಾಲುಣಿಸಬಹುದು. ಜೊತೆಗೆ ತಾಯಂದಿರಯ ಬಯಸಿದರೆ ಬೆಂಚುಗಳ ಮೇಲೆ ಮಲಗಲು ಕೂಡ ಅವಕಾಶ ಕಲ್ಪಿಸಲಾಗಿದೆ. ಸ್ತನ್ಯಪಾನ ಕೇಂದ್ರವಿಲ್ಲದ ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರು ಗ್ರಾಹಕ ಸಹಾಯವಾಣಿ ಸಂಪರ್ಕಿಸಲು ಸೂಚನೆ ನೀಡಲಾಗಿದೆ.