ವಾಷಿಂಗ್ಟನ್: ಅಮೆರಿಕದ 47ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆಯೇ ರಿಪಬ್ಲಿಕನ್ ಪಕ್ಷದ(Republican Party) ನಾಯಕ ಡೊನಾಲ್ಡ್ ಟ್ರಂಪ್ ಅವರು ದಾಖಲೆ ಸಂಖ್ಯೆಯ ಕಾರ್ಯಾದೇಶಗಳಿಗೆ ಸಹಿ ಹಾಕುವ ಮೂಲಕ ಜಾಗತಿಕವಾಗಿ ಸಂಚಲನ ಮೂಡಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರಬರುವ ನಿರ್ಧಾರದಿಂದ ಹಿಡಿದು ವರ್ಕ್ ಫ್ರಂ ಹೋಂ ರದ್ದತಿಯವರೆಗೆ ಹಲವು ಆದೇಶಗಳು ಮೊದಲೇ ದಿನದಿಂದಲೇ ಜಾರಿಯಾಗುತ್ತಿವೆ. ಟ್ರಂಪ್ ಅವರು ಸಹಿ ಹಾಕಿರುವ ಪ್ರಮುಖ ಆದೇಶಗಳು ಇಂತಿವೆ:
- ವಿಶ್ವ ಆರೋಗ್ಯ ಸಂಸ್ಥೆಯಿಂದ ಅಮೆರಿಕ ಹೊರಬರುವ ಆದೇಶಕ್ಕೆ ಟ್ರಂಪ್ ಸಹಿ. ವಿಶ್ವಸಂಸ್ಥೆಯ ಆರೋಗ್ಯ ಸಂಬಂಧಿ ಸಂಸ್ಥೆಗಾಗಿ ಅಮೆರಿಕವು ಚೀನಾಗಿಂತ ಹೆಚ್ಚು ಹಣ ಸಂದಾಯ ಮಾಡುತ್ತಿರುವುದು ನ್ಯಾಯಯುತವಲ್ಲ ಎಂದು ಟ್ರಂಪ್ ಪ್ರತಿಪಾದನೆ.
- ಅಮೆರಿಕ ಸರ್ಕಾರದ ಎಲ್ಲ ಉದ್ಯೋಗಿಗಳು ಪೂರ್ಣ ಪ್ರಮಾಣದಲ್ಲಿ ಕಚೇರಿಗೆ ಹಾಜರಾಗಬೇಕು. ಇನ್ನು ಮುಂದೆ ವರ್ಕ್ ಫ್ರಂ ಹೋಂ(ಮನೆಯಿಂದಲೇ ಕೆಲಸ)ಗೆ ಅವಕಾಶವಿಲ್ಲ. ಕೊರೊನಾ ಸೋಂಕಿನ ಅವಧಿಯಲ್ಲಿ ವೈರಸ್ ವ್ಯಾಪಿಸಬಾರದು ಎಂಬ ಕಾರಣಕ್ಕಷ್ಟೇ ಮನೆಯಿಂದ ಕೆಲಸಕ್ಕೆ ಅವಕಾಶ ನೀಡಲಾಗಿತ್ತು ಎಂದ ಟ್ರಂಪ್.
- ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಅಮೆರಿಕ ಹೊರಕ್ಕೆ. ಈ ಹಿಂದೆ ಅಮೆರಿಕದ ಅಧ್ಯಕ್ಷರಾಗಿದ್ದಾಗಲೂ ಇದೇ ಘೋಷಣೆ ಮಾಡಿ, ಒಪ್ಪಂದ ಮುರಿದುಕೊಂಡಿದ್ದ ಟ್ರಂಪ್.
- ಅಮೆರಿಕದ ದಕ್ಷಿಣ ಗಡಿಯಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ. ವಲಸೆ ಮತ್ತು ಆಶ್ರಯಕ್ಕೆ ಸಂಬಂಧಿಸಿ ಹಲವು ಹೊಸ ನಿರ್ಬಂಧಗಳ ಘೋಷಣೆ. ಅಮೆರಿಕ-ಮೆಕ್ಸಿಕೋ ಗಡಿಗೆ ಸೇನಾಪಡೆ ರವಾನೆಗೆ ನಿರ್ಧಾರ. ಜನ್ಮಸಿದ್ಧ ಪೌರತ್ವಕ್ಕೆ ಅಂತ್ಯ.
- 2021ರ ಜನವರಿ 6ರಂದು ಅಮೆರಿಕದ ಸಂಸತ್ ಮೇಲೆ ನಡೆದ ದಾಳಿ ಪ್ರಕರಣದಲ್ಲಿ ಭಾಗಿಯಾದ 1,500 ಬೆಂಬಲಿಗರಿಗೆ ಟ್ರಂಪ್ ರಿಂದ ಕ್ಷಮಾದಾನ.
- . ತೃತೀಯ ಲಿಂಗಿಗಳಿಗೆ ಸಮಾನತೆಯ ಹಕ್ಕು ನೀಡುವ ಆದೇಶಗಳು ರದ್ದು. ಅಮೆರಿಕದಲ್ಲಿ ಇನ್ನು ಮುಂದೆ ಎರಡೇ ಲಿಂಗಗಳು ಇರಲಿವೆ. ಅವೆಂದರೆ, ಗಂಡು ಮತ್ತು ಹೆಣ್ಣು ಮಾತ್ರ ಎಂದು ಘೋಷಣೆ
- ದೇಶದಲ್ಲಿ ಇಂಧನ ಉತ್ಪಾದನೆಗೆ ಒತ್ತು ನೀಡುವ ನಿಟ್ಟಿನಲ್ಲಿ “ರಾಷ್ಟ್ರೀಯ ಇಂಧನ ತುರ್ತು ಪರಿಸ್ಥಿತಿ” ಘೋಷಣೆ. ಡ್ರಿಲ್ಲಿಂಗ್ ಕಾರ್ಯಕ್ಕೆ ಉತ್ತೇಜನ ನೀಡಿ ಇಡೀ ಜಗತ್ತಿಗೆ ಇಂಧನ ರಫ್ತುದಾರ ದೇಶವಾಗಿ ಹೊರಹೊಮ್ಮುವ ಉದ್ದೇಶ
- ಚೀನಾದ ಟಿಕ್ ಟಾಕ್ ಅಪ್ಲಿಕೇಷನ್ ಗೆ ನಿಷೇಧ ಹೇರುವ ಕಾನೂನಿಗೆ 75 ದಿನಗಳ ತಡೆಯಾಜ್ಞೆ. ಟಿಕ್ ಟಾಕ್ ಸಂಸ್ಥೆಯೊಂದಿಗೆ ಪಾಲುದಾರಿಕೆಗೆ ಸಿದ್ಧತೆ.
- ಪ್ಯಾಲೆಸ್ತೀನಿಯರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ, ಆಕ್ರಮಿತ ವೆಸ್ಟ್ ಬ್ಯಾಂಕ್ ನಲ್ಲಿ ನೆಲೆಸಿರುವ ಇಸ್ರೇಲಿಗರ ಮೇಲೆ ಬೈಡೆನ್ ಸರ್ಕಾರ ವಿಧಿಸಿದ್ದ ನಿರ್ಬಂಧ ರದ್ದು.
- ಭಯೋತ್ಪಾದನೆಗೆ ಪ್ರೋತ್ಸಾಹ ನೀಡುತ್ತಿದೆ ಎಂಬ ಕಾರಣಕ್ಕೆ ಕ್ಯೂಬಾವನ್ನು ಕಪ್ಪುಪಟ್ಟಿಗೆ ಸೇರಿಸಿದ್ದ ಬೈಡೆನ್ ಸರ್ಕಾರದ ಆದೇಶವೂ ರದ್ದು.