ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಿಂದ ನಡೆಯುತ್ತಿರುವ ಸಮಾವೇಶಕ್ಕೆ ಕೌಂಟರ್ ಕೊಡಲು ಬಿಜೆಪಿ ನಾಯಕರು ಮಾಸ್ಟರ್ ಪ್ಲಾನ್ ಮಾಡಿದ್ದಾರೆ.
ಫೆ. 27ರಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ(B.S. Yediyurappa) ಹುಟ್ಟು ಹಬ್ಬ ಕಾರ್ಯಕ್ರಮವನ್ನು ದಾವಣಗೆರೆ ಬದಲಾಗಿ ಇದೇ ಬೆಳಗಾವಿ ನೆಲದಲ್ಲಿ ಆಯೋಜಿಸಿ ಠಕ್ಕರ್ ಕೊಡಲು ಮಾಸ್ಟರ್ ಪ್ಲಾನ್ ರೂಪಿಸಲಾಗಿದೆ. ಬಿ.ಎಸ್. ಯಡಿಯೂರಪ್ಪ ಅವರು ಬಿಜೆಪಿಯ(BJP) ಕೇಂದ್ರ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿ (Election Committee) ಸದಸ್ಯರಾಗಿದ್ದಾರೆ. ಹೀಗಾಗಿ ಅವರ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಬಿಜೆಪಿ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಇಂದು ಬೆಳಗಾವಿಯಲ್ಲಿ ಕಾಂಗ್ರೆಸ್(congress) ಸಮಾವೇಶ ನಡೆಯುತ್ತಿದೆ. ಎರಡು ಪ್ರಮುಖ ಉದ್ದೇಶ ಮುಂದಿಟ್ಟುಕೊಂಡು ಕಾಂಗ್ರೆಸ್ ನಾಯಕರು ಸಮಾವೇಶ ಆಯೋಜಿಸಿದ್ದಾರೆ. ಮಹಾತ್ಮ ಗಾಂಧಿಯವರು ಬೆಳಗಾವಿ ನೆಲದಲ್ಲಿ 1924 ರಲ್ಲಿ ಆಗಮಿಸಿ, ಮೊದಲ ಕಾಂಗ್ರೆಸ್ ಅಧಿವೇಶನ ನಡೆಸಿದ್ದರು. ಮಹಾತ್ಮ ಗಾಂಧಿ ಬೆಳಗಾವಿಗೆ ಆಗಮಿಸಿ, 100 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಈ ಸಮಾವೇಶ ಆಯೋಜಿಸಲಾಗಿದೆ.
ಕಳೆದು ತಿಂಗಳು ಸಮಾವೇಶ ಆಚರಿಸಲು ಕಾಂಗ್ರೆಸ್ ಸಿದ್ಧತೆ ಮಾಡಿಕೊಂಡಿತ್ತು. ಆದರೆ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶರಾದ ಕಾರಣಕ್ಕೆ ಕಾರ್ಯಕ್ರಮ ಮುಂದೂಡಿಕೆ ಮಾಡಲಾಗಿತ್ತು.
ಇನ್ನೊಂದು ಕಾರಣ ಎಂದರೆ, ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah),ಡಾ.ಬಿ.ಆರ್. ಅಂಬೇಡ್ಕರ್ (B.R. Ambedkar) ಬಗ್ಗೆ ನೀಡಿದ್ದ ಹೇಳಿಕೆ ಟಾರ್ಗೆಟ್ ಮಾಡಿಕೊಂಡಿರುವ ಕಾಂಗ್ರೆಸ್ ನಾಯಕರು, ಸಮಾವೇಶ ಹಮ್ಮಿಕೊಂಡಿದ್ದಾರೆ.
ಇದಕ್ಕೆ ಟಾಂಗ್ ನೀಡುವುದಕ್ಕಾಗಿ ಫೆಬ್ರವರಿಯಲ್ಲಿ ಬಿಜೆಪಿಯಿಂದ ಪ್ರತಿ ಸಮಾವೇಶ ನಡೆಯುತ್ತಿದೆ. ಇದೆ ಬೆಳಗಾವಿ ನೆಲದಲ್ಲೇ ಉತ್ತರ ನೀಡಲು ಯಡಿಯೂರಪ್ಪ ಅವರ ಹುಟ್ಟು ಹಬ್ಬ ಬಳಕೆ ಮಾಡಿಕೊಳ್ಳುತ್ತಿದೆ.