ಬೆಂಗಳೂರು: ಇಲ್ಲಿಯ ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ವ್ಯಕ್ತಿಯೋರ್ವ ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದ್ದು, ಆತನನ್ನು ಮೆಟ್ರೋ ಸಿಬ್ಬಂದಿ ರಕ್ಷಿಸಿದ್ದಾರೆ. ಸದ್ಯ ಈ ಕುರಿತು ತನಿಖೆ ನಡೆಸಲಾಗುತ್ತಿದೆ.
ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಬಿಹಾರ ಮೂಲದ ಅನಿಲ್ ಕುಮಾರ್ ಪಾಂಡೆ(49) ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೆ ಯತ್ನಿಸಿರುವ ವ್ಯಕ್ತಿ ಮಾಜಿ ಏರ್ ಪೋರ್ಸ್ ಅಧಿಕಾರಿಯಾಗಿದ್ದರು. ಮೆಟ್ರೋ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದಾಗಿ ಅನಿಲ್ ಕುಮಾರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅನಿಲ್ ಗೆ ಯಾವುದೇ ಗಾಯಗಳಾಗಿಲ್ಲ ಎಂಬ ಮಾಹಿತಿ ಸಿಕ್ಕಿದೆ. ಘಟನೆ ನಡೆಯುತ್ತಿದ್ದಂತೆ 15 ನಿಮಿಷಗಳ ಕಾಲ ಮೆಟ್ರೋ ಸಂಚಾರ ಸ್ಥಗಿತವಾಗಿತ್ತು. ಇದರಿಂದಾಗಿ ಪ್ರಯಾಣಿಕರು ಪರದಾಡುವಂತಾಗಿತ್ತು. ಈ ಘಟನೆಯಿಂದ ಸುಮಾರು 15 ನಿಮಿಷಗಳ ಕಾಲ ಮೆಟ್ರೋ ಸಂಚಾರ ತಡವಾಗಿದೆ ಎಂದು ಬಿಎಂಆರ್ ಸಿ ಎಲ್ ಅಧಿಕಾರಿಗಳು ಅಧಿಕೃತ ಮಾಹಿತಿ ನೀಡಿದ್ದಾರೆ.
ಘಟನೆಯ ಕುರಿತು ಮಾತನಾಡಿರುವ ಬಿಎಂಆರ್ ಸಿಎಲ್ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ್ ಚೌಹಾಣ್, ಸೋಮವಾರ ಬೆಳಗ್ಗೆ 10.25ರ ಸಮಯದಲ್ಲಿ ಓರ್ವ ವ್ಯಕ್ತಿ ಹಳಿಗೆ ಹಾರಿದರು. ಆತ 49 ವರ್ಷ ವಯಸ್ಸಿನ ಅನಿಲ್ ಕುಮಾರ್ ಪಾಂಡೆ(Anil Kumar Pandey) ಎಂದು ಗುರುತಿಸಲಾಗಿದೆ. ಆತ ಮಾಜಿ ಏರ್ ಪೋರ್ಸ್(Air Force) ಸಿಬ್ಬಂದಿ. ಇದ್ದಕ್ಕಿದ್ದಂತೆ ಮೆಟ್ರೋ ಹಳಿಗೆ ಜಿಗಿದಿದ್ದಾರೆ. ಕೂಡಲೇ ನಮ್ಮ ಸಿಬ್ಬಂದಿ ETS ಆಫ್ ಮಾಡಿ ರಕ್ಷಣೆ ಮಾಡಿದ್ದಾರೆ. ಹೀಗಾಗಿ ಪ್ರಾಣ ಉಳಿದಿದೆ.
ವ್ಯಕ್ತಿಯನ್ನ ಕೂಡಲೇ ಸ್ಥಳೀಯ ಆಸ್ಪತ್ರೆಗೆ (ಕಳುಹಿಸಲಾಗಿದೆ. ಈ ಕುರಿತು ಸ್ಥಳೀಯ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಯಶವಂತಪುರದಿಂದ ಸಿಲ್ಕ್ ಬೋರ್ಡ್ ಮಾರ್ಗಕ್ಕೆ 4 ಹೆಚ್ಚುವರಿ ರೈಲುಗಳನ್ನು ಕಾರ್ಯಚರಣೆಗೆ ಇಳಿಸಲಾಗಿದೆ ಎಂದು ಹೇಳಿದ್ದಾರೆ.