ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್(Saif Ali Khan) ಅವರ ಬಂಗಲೆಗೆ ನುಗ್ಗಿ ಅವರಿಗೆ 6 ಬಾರಿ ಚೂರಿಯಿಂದ ಇರಿದಿದ್ದ ಪ್ರಕರಣದ ಆರೋಪಿ, ಬಾಂಗ್ಲಾದೇಶದ(Bangladesh) ಪ್ರಜೆಯನ್ನು ಭಾನುವಾರವಷ್ಟೇ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಬಂಧನದ ಬಳಿಕ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಆತನ ಪರ ವಕಾಲತ್ತು ವಹಿಸಲು ವಕೀಲರಿಬ್ಬರ ನಡುವೆಯೇ ಫೈಟ್ ನಡೆದ ಘಟನೆಗೆ ಕೋರ್ಟ್(court) ಸಾಕ್ಷಿಯಾಗಿದೆ.
ನ್ಯಾಯಾಲಯದೊಳಗೇ ಈ ಹೈಡ್ರಾಮಾ ನಡೆದಿದ್ದು, ಕೊನೆಗೆ ಈ ವಿಚಾರದಲ್ಲಿ ನ್ಯಾಯಾಧೀಶರೇ ಮಧ್ಯಸ್ಥಿಕೆ ವಹಿಸಿದ ಘಟನೆಯೂ ನಡೆದಿದೆ. ಪೊಲೀಸರು (police)ಭಾನುವಾರ ಮಧ್ಯಾಹ್ನ ಆರೋಪಿಯನ್ನು ಮುಂಬೈನ ಸ್ಥಳೀಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಹಾಜರುಪಡಿಸಿದ್ದರು. ಈ ವೇಳೆ ನ್ಯಾಯಾಧೀಶರು, ‘ಪೊಲೀಸರ ವಿರುದ್ಧ ನಿಮ್ಮದೇನಾದರೂ ದೂರುಗಳಿವೆಯೇ’ ಎಂದು ಆರೋಪಿ ಮೊಹಮ್ಮದ್ ಶರೀಫುಲ್ ಇಸ್ಲಾಂ ಶೆಹಜಾದ್‌ನನ್ನು(Shehzad) ಪ್ರಶ್ನಿಸಿದರು. ಅದಕ್ಕೆ ಆತ ‘ಇಲ್ಲ’ ಎಂದು ಉತ್ತರಿಸಿದ್ದಾನೆ.
ಬಳಿಕ ಜಡ್ಜ್, ಆರೋಪಿಯನ್ನು ಪ್ರತಿನಿಧಿಸುವ ವಕೀಲರು ಯಾರು ಎಂದು ಕೇಳಿದಾಗ, ವಕೀಲರೊಬ್ಬರು ಮುಂದೆ ಬಂದು, ನಾನೇ ಆರೋಪಿ ಪರ ವಕೀಲ ಎಂದು ನುಡಿದರು. ಜೊತೆಗೆ ಇನ್ನೇನು ಅವರು ವಕಾಲತ್‌ನಾಮಾ(ಆರೋಪಿಯನ್ನು ಪ್ರತಿನಿಧಿಸಲು ವಕೀಲರಿಗೆ ಅಧಿಕಾರ ನೀಡುವ ಕಾನೂನು ದಾಖಲೆ)ಗೆ ಆರೋಪಿಯ ಸಹಿ(sign) ಹಾಕಿಸಲು ಮುಂದಾಗುವಷ್ಟರಲ್ಲೇ, ಮತ್ತೊಬ್ಬ ವಕೀಲ (lawyer) ನೇರವಾಗಿ ಆರೋಪಿಯ ಬಳಿ ಬಂದು ತಮ್ಮ ವಕಾಲತ್‌ನಾಮಾಗೆ ತರಾತುರಿಯಲ್ಲಿ ಆರೋಪಿ ಶೆಹಜಾದ್‌ನ ಸಹಿ ಹಾಕಿಸಿಕೊಂಡರು. ಕ್ಷಣಮಾತ್ರದಲ್ಲಿ ಆದ ಈ ಬೆಳವಣಿಗೆಯಿಂದ ಕೋರ್ಟ್‌ನಲ್ಲಿದ್ದ ಎಲ್ಲರೂ ಗೊಂದಲಕ್ಕೀಡಾದರು.
ಇಬ್ಬರು ವಕೀಲರೂ ‘ಆರೋಪಿ ಪರ ವಕಾಲತ್ತು (Advocacy) ವಹಿಸುವುದು ನಾನೇ, ನಾನೇ’ ಎಂದು ವಾದಿಸತೊಡಗಿದರು. ಕೊನೆಗೆ ನ್ಯಾಯಾಧೀಶರೇ ಮಧ್ಯಪ್ರವೇಶಿಸಿ, “ನೀವಿಬ್ಬರೂ ಒಟ್ಟಾಗಿ, ಒಂದೇ ತಂಡವಾಗಿ ಆರೋಪಿಯ ಪರ ವಕಾಲತ್ತು ವಹಿಸಿ” ಎಂದು ಸೂಚಿಸಿದರು. ಇದಕ್ಕೆ ಇಬ್ಬರೂ ಒಪ್ಪಿದ್ದರಿಂದ ಜಡ್ಜ್ ಸಂಧಾನ ಯಶಸ್ವಿಯಾಯಿತು.
ನಂತರ ಆರೋಪಿ ಶೆಹಜಾದ್‌ನನ್ನು ನ್ಯಾಯಾಲಯ 5 ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿ ಆದೇಶ ಹೊರಡಿಸಿತು. ಈ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ಸಂಚು ಇರುವ ಶಂಕೆಯನ್ನೂ ಅಲ್ಲಗಳೆಯುವಂತಿಲ್ಲ ಎಂದೂ ಅಭಿಪ್ರಾಯಪಟ್ಟಿತು.
ಸೈಫ್ ನಾಳೆ ಡಿಸ್ಚಾರ್ಜ್ ಸಾಧ್ಯತೆ:
ಈ ನಡುವೆ, ಚೂರಿ ಇರಿತಕ್ಕೊಳಗಾಗಿ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ(Lilavati Hospital) ಚಿಕಿತ್ಸೆ ಪಡೆಯುತ್ತಿರುವ ನಟ ಸೈಫ್ ಅಲಿ ಖಾನ್ ಚೇತರಿಸಿಕೊಂಡಿದ್ದಾರೆ. ಮಂಗಳವಾರವೇ ಅವರನ್ನು ಡಿಸ್ಚಾರ್ಜ್ (Discharge) ಮಾಡುವ ಸಾಧ್ಯತೆಯಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.