ಅಭಿಮಾನಿ ದಂಪತಿಗೆ ಶಾಕ್!
ಮುಂಬೈ: ಭಾರತದಲ್ಲಿ ಕೋಲ್ಡ್ ಪ್ಲೇ(Coldplay) ಸಂಗೀತ ಕಾರ್ಯಕ್ರಮ ಘೋಷಣೆ ಆದಾಗಿನಿಂದ ಕಾರ್ಯಕ್ರಮದ ದುಬಾರಿ ಟಿಕೆಟ್ ದರ, ಅದಕ್ಕಾಗಿ ಮುಗಿಬೀಳುತ್ತಿರುವ ಸಂಗೀತ ಪ್ರೇಮಿಗಳು ಭಾರೀ ಸುದ್ದಿಯಾಗುತ್ತಿದ್ದಾರೆ. ಇದರ ನಡುವೆಯೇ ಸಾವಿರಾರು ರೂಪಾಯಿಗಳನ್ನು ಕೊಟ್ಟು ತಂದಿದ್ದ ಟಿಕೆಟ್ ಗಳನ್ನು (ticket)ಕೆಲಸದಾಕೆ ಅನಾಮತ್ತಾಗಿ ಕಸದ ಬುಟ್ಟಿಗೆ ಎಸೆದರೆ ಹೇಗಿರಬೇಡ?
ಇಂಥ ಪರಿಸ್ಥಿತಿಯನ್ನು ಮುಂಬೈನ(mumbai) ಮಹಿಳೆಯೊಬ್ಬರು ಅನುಭವಿಸಿದ್ದಾರೆ. ಮುಂಬೈನಲ್ಲಿ ಇಂದು(ಸೋಮವಾರ) ನಡೆಯಲಿರುವ ಕೋಲ್ಡ್ ಪ್ಲೇ ಸಂಗೀತ ಕಾರ್ಯಕ್ರಮಕ್ಕೆಂದು ಪ್ರಾಚಿ ಸಿಂಗ್ ಎಂಬವರು 2 ಟಿಕೆಟ್ ಗಳನ್ನು ಖರೀದಿಸಿದ್ದರು. ಹೊರಡುವ ಗಡಿಬಿಡಿಯಲ್ಲಿ ಟಿಕೆಟ್ ಮರೆಯುವುದು ಬೇಡ ಎಂದು, ಅದನ್ನು ಒಂದು ಲಕೋಟೆಯೊಳಗೆ ಇಟ್ಟು, ಆ ಲಕೋಟೆಯನ್ನು ಡೈನಿಂಗ್ ಟೇಬಲ್ ಮೇಲಿಟ್ಟಿದ್ದರು.
ಬೆಳಗ್ಗೆ ಪತಿ-ಪತ್ನಿಯಿಬ್ಬರೂ ಲಗುಬಗೆಯಿಂದ ರೆಡಿಯಾಗಿದ್ದರು, ಹೊರಗೆ ಕಾರು ಕೂಡ ರೆಡಿಯಾಗಿತ್ತು. ಇನ್ನೇನು ಮನೆಯಿಂದ ಹೊರಗೆ ಕಾಲಿಡುವಾಗ ಟಿಕೆಟ್ ಕೈಗೆತ್ತಿಕೊಳ್ಳಲೆಂದು ಟೇಬಲ್ ಬಳಿ ಹೋದರೆ, ಟಿಕೆಟ್ ಇಲ್ಲ! ಅರೇ, ರಾತ್ರಿಯಷ್ಟೇ ಇದೇ ಟೇಬಲ್ ಮೇಲೆ ಇಟ್ಟಿದ್ದೆನಲ್ಲ, ಈಗೆಲ್ಲಿ ಹೋಯಿತು ಎಂದು ಆತಂಕದಿಂದ ಮನೆಯೆಲ್ಲ ತಡಕಾಡಿದರೂ ಅದರ ಪತ್ತೆಯಿಲ್ಲ. ಕೊನೆಗೆ ಮನೆಕೆಲಸದಾಕೆ ಬಳಿ ಹೋಗಿ, ‘ನೀನೇನಾದರೂ ಇಲ್ಲಿಟ್ಟಿದ್ದ ಟಿಕೆಟ್ ನೋಡಿದಿಯಾ’ ಎಂದು ಕೇಳಿದಾಗ ಆಕೆ, ‘ಹೌದು ಅಮ್ಮಾವ್ರೇ, ಟೇಬಲ್ ಮೇಲೆ ಯಾವುದೋ ಲಕೋಟೆ ಬಿದ್ದಿತ್ತು. ನಾನು ಕ್ಲೀನ್ ಮಾಡುವಾಗ ಅದನ್ನೆತ್ತಿ ಕಸದ ಬುಟ್ಟಿಗೆ ಹಾಕಿಬಿಟ್ಟೆ. ಕಸದವರು ಬಂದು ತಗೊಂಡು ಹೋಗಿ ಆಯ್ತು’ ಎಂದು ಬಿಡಬೇಕೇ?

ಆಕೆ ಹೇಳಿ ಮುಗಿಸುವಷ್ಟರಲ್ಲಿ ಪ್ರಾಚಿ ಸಿಂಗ್ ಮತ್ತು ಗಂಡ ನೇರವಾಗಿ ಕಸ ತುಂಬಿಸುವ ಪಾಲಿಕೆಯ ಲಾರಿ ಬಳಿ ಓಡಿ ಹೋಗಿ, ವಿಷಯ ತಿಳಿಸಿದ್ದಾರೆ. ಪಾಲಿಕೆ ಸಿಬ್ಬಂದಿ ಟ್ರಕ್ ಪೂರ್ತಿ ಕಸವನ್ನೆಲ್ಲ ತಡಕಾಡಿದರೂ ಟಿಕೆಟ್ ಮಾತ್ರ ಸಿಕ್ಕಿಲ್ಲ. ತಮಗಾದ ನೋವು ಮತ್ತು ನಿರಾಸೆಯನ್ನು ಪ್ರಾಚಿ ಸಿಂಗ್ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಅನೇಕ ನೆಟ್ಟಿಗರು ಅದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಕಸದ ಲಾರಿಯಲ್ಲಿ ಹುಡುಕಾಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅವರು ಅಪ್ ಲೋಡ್ ಮಾಡಿದ್ದಾರೆ.
ಈ ವಿಡಿಯೋ ಕೆಲವೇ ಗಂಟೆಗಳಲ್ಲಿ 55 ಲಕ್ಷ ವೀಕ್ಷಣೆಯನ್ನು ಪಡೆದಿದ್ದು, 43 ಸಾವಿರ ಲೈಕ್ ಗಳೂ ಬಂದಿವೆ. ಮುಂಬೈನಲ್ಲಿ ಸೋಮವಾರ ಕೋಲ್ಡ್ ಪ್ಲೇ ಕನ್ಸರ್ಟ್ ನಡೆಯಲಿದ್ದು, ಇದರ ಟಿಕೆಟ್ ಗಳು 2,500 ರೂ.ಗಳಿಂದ 35 ಸಾವಿರ ರೂ.ಗಳವರೆಗೆ ಮಾರಾಟವಾಗುತ್ತಿವೆ. ಮುಂಬೈ ಬಳಿಕ ಜ.25 ಮತ್ತು 26ರಂದು ಅಹಮದಾಬಾದ್ ನಲ್ಲಿ ಕೋಲ್ಡ್ ಪ್ಲೇ ಬ್ಯಾಂಡ್ ನ ಸಂಗೀತ ಕಾರ್ಯಕ್ರಮ ನಡೆಯಲಿದೆ.