ಬೆಂಗಳೂರು: ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಚಾರ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗುತ್ತಿದೆ. ಈಗಾಗಲೇ ಕಾಂಗ್ರೆಸ್ ನಲ್ಲಿ ಕೂಡ ಈ ವಿಚಾರ ದೊಡ್ಡ ಚರ್ಚೆಗೆ ಕಾರಣವಾಗುತ್ತಿದೆ.
ಸತೀಶ್ ಜಾರಕಿಹೊಳಿಗೆ ಅಧ್ಯಕ್ಷ ಪಟ್ಟ ಸಿಗುವುದು ಬಹುತೇಕ ಖಚಿತ ಎನ್ನುವುದು “ಕರ್ನಾಟಕ ನ್ಯೂಸ್ ಬೀಟ್”ಗೆ ಕಾಂಗ್ರೆಸ್‌ನ ಉನ್ನತ ಮೂಲಗಳಿಂದಲೇ ಮಾಹಿತಿ ಲಭ್ಯವಾಗಿದೆ. ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲೆಯ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿಗೆ ಈ ಸ್ಥಾನ ನೀಡಬೇಕು ಎಂಬ ಕೂಗು ಇತ್ತೀಚೆಗಷ್ಟೇ ಕೇಳಿ ಬಂದಿತ್ತು. ಇದಕ್ಕೆ ಡಿಕೆಶಿ ಸೇರಿದಂತೆ ಹಲವು ನಾಯಕರು ಪರೋಕ್ಷವಾಗಿ ಟಾಂಗ್ ಕೊಡುವ ಮೂಲಕ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ, ಹಲವರು ತಾವೂ ಆಕಾಂಕ್ಷಿತರು ಎಂಬ ರೀತಿ ಮಾತನಾಡಿದ್ದರು.
ರಾಜ್ಯದಲ್ಲಿ ಕೆಪಿಸಿಸಿ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಣೆ ಮಾಡುತ್ತಿರುವ ಡಿ.ಕೆ.ಶಿವಕುಮಾರ್ ಅವರನ್ನು ಬದಲಾವಣೆ ಮಾಡಿ, ಆ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ ಅವರನ್ನು ಕರೆತರಲು ಈಗಾಗಲೇ ಕಾಂಗ್ರೆಸ್ ಹೈಕಮಾಂಡ್ ನಾಯಕರು ಮುಂದಾಗಿದ್ದಾರೆ ಎನ್ನಲಾಗಿದೆ.
ಈಗಾಗಲೇ ಕಾಂಗ್ರೆಸ್ ಹೈಕಮಾಂಡ್ ನಾಯಕರು ಮೂರು ಸುತ್ತಿನ ಮಾತುಕತೆ ನಡೆಸಿದ್ದಾರೆ. ಇತ್ತ ಕೆಪಿಸಿಸಿ ಘಟಕದ ಅಧ್ಯಕ್ಷ ಸ್ಥಾನಕ್ಕಾಗಿ ನಿರಂತರವಾಗಿ ಆರೆಂಟು ತಿಂಗಳಿಂದ ಸತೀಶ್ ಜಾರಕಿಹೊಳಿ ಪ್ರಯತ್ನಿಸುತ್ತಿದ್ದಾರೆ. ದೆಹಲಿಗೂ ನಾಲ್ಕೈದು ಬಾರಿ ಹೋಗಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಹೀಗಾಗಿ ಸತೀಶ್ ಆಯ್ಕೆ ಬಹುತೇಕ ಖಚಿತ ಎನ್ನಲಾಗುತ್ತಿದೆ.
ಕೆಪಿಸಿಸಿ ಅಧ್ಯಕ್ಷ ಪಟ್ಟ ಸಾಹುಕಾರ್ ಗೆ ಫಿಕ್ಸ್!?
“ಕರ್ನಾಟಕ ನ್ಯೂಸ್ ಬೀಟ್” ಸತೀಶ್ ಜಾರಕಿಹೊಳಿ ಅವರ ಆಯ್ಕೆ ಹಿಂದಿನ ಕಾರಣಗಳ ಪಟ್ಟಿಯನ್ನು ನಿಮ್ಮ ಮುಂದೆ ಇಡುತ್ತಿದೆ.
- ಸತೀಶ್ ಜಾರಕಿಹೊಳಿ, ಸಿಎಂ ಸಿದ್ಧರಾಮಯ್ಯರ ಆಪ್ತ ಬಳಗದಲ್ಲಿ ಗುರುತಿಸಿಕೊಂಡವರು.
- ರಾಜಕಾರಣಕ್ಕೆ ಎಂಟ್ರಿ ಕೊಟ್ಟಾಗ ಬೇರೆ ಪಕ್ಷದಲ್ಲಿದ್ರು.
- ಆದ್ರೆ ಕಾಂಗ್ರೆಸ್ ಪಕ್ಷಕ್ಕೆ ಬಂದ ಬಳಿಕ ಕಟ್ಟಾ ಕಾಂಗ್ರೆಸ್ಸಿಗನಾಗಿ ದುಡಿಯುತ್ತಿರುವವರು.
- ಕಿತ್ತೂರು ಕರ್ನಾಟಕ ಭಾಗದ ಬೆಳಗಾವಿ ಜಿಲ್ಲೆಗೆ ಸೇರಿದವರಾದ್ರೂ, ಕಿತ್ತೂರು ಕರ್ನಾಟಕದ 6 ಜಿಲ್ಲೆಗಳು ಸೇರಿದಂತೆ ಕಲ್ಯಾಣ ಕರ್ನಾಟಕದ 5 ಜಿಲ್ಲೆಗಳು ಹಾಗೂ ಮಧ್ಯ ಕರ್ನಾಟಕದ 2 ಜಿಲ್ಲೆಗಳಲ್ಲಿ ಸತೀಶ್ ಜಾರಕಿಹೊಳಿ ಅವರ ಹವಾ ಇದೆ.
- ಪ್ರಬಲ ವಾಲ್ಮೀಕಿ ಸಮುದಾಯಕ್ಕೆ ಸೇರಿದ ನಾಯಕ.
- ಅಂದಾಜು 45 ರಿಂದ 50 ಹಾಲಿ ಕಾಂಗ್ರೆಸ್‌ನ ಶಾಸಕರುಗಳು ಸತೀಶ್ ಜಾರಕಿಹೊಳಿ ಅವರ ಜೊತೆಗಿದ್ದಾರೆ.
- ಸರ್ಕಾರದಲ್ಲಿ ಸಿಎಂ ಸಿದ್ಧರಾಮಯ್ಯ ಕೂಡ ಸತೀಶ್ ಜಾರಕಿಹೊಳಿ ಬೆನ್ನಿಗೆ ಇದ್ದಾರೆ.
- ಪ್ರಬಲ ಖಾತೆಯನ್ನು ಹೊಂದಿರುವ ಸತೀಶ್ ಜಾರಕಿಹೊಳಿ, ಪಕ್ಷದ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಾರೆ.
- ನಂಬಿಕಸ್ಥ ವ್ಯಕ್ತಿಯಾಗಿ, ಮೃಧು ಸ್ವಭಾವದ, ವರ್ಚಸ್ಸು ಉಳ್ಳಂತಹ ನಾಯಕ.
- ವಾಲ್ಮೀಕಿ ಸಮುದಾಯ ಎಸ್‌ಟಿ ಪಂಗಡದ ವ್ಯಾಪ್ತಿಯಲ್ಲಿದ್ದು, ಸಿದ್ಧರಾಮಯ್ಯ ಸಂಘಟನೆ ಮಾಡಿ ಉನ್ನತ ಸ್ಥಾನಕ್ಕೆ ಏರಿದ ಅಹಿಂದ ಪಟ್ಟಿಗೆ ಸೇರುತ್ತಿದ್ದು, ರಾಜ್ಯದಲ್ಲಿ ಅಹಿಂದ ಮತಗಳು ಕಾಂಗ್ರೆಸ್‌ಗೆ ಸಿದ್ಧರಾಮಯ್ಯರ ಬಳಿಕ ಸೆಳೆಯುವ ಛಾತಿ ಸಚಿವ ಸತೀಶ್ ಜಾರಕಿಹೊಳಿಗೆ ಇದೆ. ಹೀಗಾಗಿ, ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ಸಚಿವ ಸತೀಶ್ ಜಾರಕಿಹೊಳಿ ಆಯ್ಕೆ ಬಹುತೇಕ ಖಚಿತ ಎನ್ನಲಾಗಿದೆ. ಇದು “ಕರ್ನಾಟಕ ನ್ಯೂಸ್ ಬೀಟ್” ನ Exclusive ರಿಪೋರ್ಟ್.