ಮೈಸೂರು: ಮುಡಾ(ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಹಗರಣಕ್ಕೆ ಸಂಬಂಧಿಸಿದಂತೆ ಇಡಿ ತನಿಖೆ ನಡೆಸುತ್ತಿದ್ದು, ಈಗಾಗಲೇ ಹಲವು ಅವ್ಯವಹಾರ ಭೇದಿಸಿದೆ. ಈ ಮಧ್ಯೆ ಕೋಡ್ ವರ್ಡ್ ರೂಪದಲ್ಲಿ ನಡೆದ ಹಗರಣವನ್ನು ಬಯಲು ಮಾಡಿದೆ.
ಹಿಂದೆ ಇಡಿ (ED) ದಾಳಿಗೆ ಒಳಗಾಗಿದ್ದ ಮೈಸೂರು ಮೂಲದ ಬಿಲ್ದಡ್ ಜಯರಾಮ್ ಕೋಕನಟ್ ಕೋಡ್ವರ್ಡ್(Jayaram coconut codeword) ಬಳಸಿ ಅಕ್ರಮ ವ್ಯವಹಾರ ನಡೆಸುತ್ತಿದ್ದ ಎಂಬುವುದನ್ನು ಇಡಿ ಬಯಲು ಮಾಡಿದೆ. ಮುಡಾದಲ್ಲಿ ನಡೆದಿರುವ ಹಗರಣದಲ್ಲಿ ಬಿಲ್ಡರ್ ಜಯರಾಮ್ ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಬೇನಾಮಿಯಾಗಿದ್ದ ಎಂದು ಹೇಳಲಾಗುತ್ತಿದೆ. ಅದರಲ್ಲೂ ವಕ್ರತುಂಡ ಗೃಹ ನಿರ್ಮಾಣ ಸಹಕಾರ ಸಂಘದಿಂದ ಸಾಕಷ್ಟು ಅವ್ಯವಹಾರ ನಡೆಸಿದ್ದಾನೆ ಎಂದು ಇಡಿ ಹೇಳಿದೆ.
ಮುಡಾದ ಅಧಿಕಾರಿ ಒಬ್ಬರಿಗೆ ಅಕ್ರಮವಾಗಿ 92 ನಿವೇಶನಗಳನ್ನು ಹಾಗೂ ಮೈಸೂರಿನ ವಿಪ ಸದಸ್ಯರೊಬ್ಬರಿಗೆ 128 ನಿವೇಶನಗಳನ್ನು ಅಕ್ರಮವಾಗಿ ಬದಲಿ ನಿವೇಶನ ಹಾಗೂ ಬಿಟ್ ಲ್ಯಾಡ್ ಮೂಲಕ ನೀಡಲಾಗಿದೆ.
ಇಲ್ಲಿ ಸಾಕಷ್ಟು ಕಪ್ಪು ಹಣದ ವ್ಯವಹಾರ ಕೂಡ ನಡೆದಿದ್ದು, ಇದಕ್ಕೆ ಜಯರಾಮ್ ಕೋಕನಟ್ ಎಂದು ಕೋಡ್ ವರ್ಡ್ ಬಳಸುತ್ತಿದ್ದನಂತೆ. 1 ಕೋಕನಟ್ ಎಂದರೆ 1 ಲಕ್ಷ ರೂ. 50 ಕೋಕನಟ್ ಎಂದರೆ 50 ಲಕ್ಷ ರೂ. ಮತ್ತು 100 ಕೋಕನಟ್ ಎಂದರೆ 1 ಕೋಟಿ ಎಂದು ಕೋಡ್ ವರ್ಡ್ ಬಳಸುತ್ತಿದ್ದ ಎಂಬುವುದು ಇಡಿ ತನಿಖೆಯಿಂದ ತಿಳಿದು ಬಂದಿದೆ.
ಮುಡಾದಲ್ಲಿನ 300 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಿದ ನಂತರ, ಇಡಿ ಅಧಿಕಾರಿಗಳು 631 ನಿವೇಶನಗಳ ವಿವರ ಕೇಳಿ ಮುಡಾ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಈ 631 ನಿವೇಶನಗಳ ಅಕ್ರಮದಲ್ಲಿ ಬಹುತೇಕರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿದ್ದಾರೆ. ಮುಡಾ ಮಾಜಿ ಆಯುಕ್ತರಿಗೆ ಸೇರಿದ 198 ಬೇನಾಮಿ ನಿವೇಶನಗಳಿವೆ ಎನ್ನಲಾಗಿದೆ. ಹಲವು ನಿವೇಶನಗಳ ಕುರಿತು ಮಾಹಿತಿ ನೀಡುವಂತೆ ಮುಡಾಗೆ ಈಗ ಇಡಿ ಪತ್ರ ಬರೆದಿದೆ.