ವಡೋದರಾ: ಸ್ಮರಣ್ ರವಿಚಂದ್ರನ್(101) ಅವರ ಶತಕದ ನೆರವಿನಿಂದ ಮಿಂಚಿದ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ಫೈನಲ್ ಪಂದ್ಯದಲ್ಲಿ ವಿದರ್ಭ ತಂಡವನ್ನು 36 ರನ್‌ಗಳಿಂದ ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದು ಈ ಕೂಟದಲ್ಲಿ ಕರ್ನಾಟಕ್ಕೆ ಒಲಿದ 5ನೇ ಟ್ರೋಫಿ. ಈ ಹಿಂದೆ ನಾಲ್ಕು ಬಾರಿ ಫೈನಲ್‌ಗೇರಿದ್ದು ಅಷ್ಟೂ ಬಾರಿಯೂ ಟ್ರೋಫಿ ಗೆದ್ದುಕೊಂಡಿತ್ತು.
ಇಲ್ಲಿನ ಕೋಟಂಬಿ ಕ್ರೀಡಾಂಗಣದಲ್ಲಿ(Kotambi Stadium) ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಆಹ್ವಾನ ಪಡೆದ ಕರ್ನಾಟಕ ಆರಂಭಿಕ ಆಘಾತದ ಹೊರತಾಗಿಯೂ 6 ವಿಕೆಟ್‌ಗೆ 348 ರನ್‌ಗಳ ಬೃಹತ್ ಮೊತ್ತದ ಪೇರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ವಿದರ್ಭ ಕೊನೇ ತನಕವೂ ದಿಟ್ಟ ಹೋರಾಟ ನಡೆಸಿತು. ಆದರೆ, ಅಂತಿಮವಾಗಿ 48.2 ಓವರ್‌ಗಳಲ್ಲಿ 312 ರನ್‌ಗೆ ಸರ್ವಪತನ ಕಂಡಿತು.
ಹಾಲಿ ಟೂರ್ನಿಯಲ್ಲಿ ಶತಕಗಳ ಸರಮಾಲೆ ಕಟ್ಟಿದ್ದ ಕರುಣ್ ನಾಯರ್ ಫೈನಲ್ ಪಂದ್ಯದಲ್ಲಿ 27 ರನ್‌ಗೆ ಸೀಮಿತರಾದರು. ಅವರನ್ನು ಪ್ರಸಿದ್ಧ್ ಕೃಷ್ಣ ಬೌಲ್ಡ್ ಮಾಡಿದರು. ಮಹಾರಾಷ್ಟ್ರ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಶತಕ ಸಿಡಿಸಿದ್ದ ಧ್ರುವ ಶೋರೆ ಈ ಪಂದ್ಯದಲ್ಲಿ ಶತಕ ಬಾರಿಸಿ ಮತ್ತೆ ಮಿಂಚಿದರು. 111 ಎಸೆತ ಎದುರಿಸಿದ ಅವರು 8 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 110 ರನ್ ಚಚ್ಚಿದರು. ಅಂತಿಮ ಹಂತದಲ್ಲಿ ಸಿಡಿದು ನಿಂತ ಹರ್ಷ ದುಬೆ ಸತತ ಸಿಕ್ಸರ್ ಮತ್ತು ಬೌಂಡರಿ ಬಾರಿಸಿ ಪಂದ್ಯವನ್ನು ರೋಚಕ ಹಂತಕ್ಕೆ ಕೊಂಡೊಯ್ದರು. ಆದರೆ, ಕರ್ನಾಟಕ ಗೆಲುವು ಬಿಟ್ಟುಕೊಡಲಿಲ್ಲ.
ಶಕ್ತಿ ಮೀರಿ ಬ್ಯಾಟಿಂಗ್ ನಡೆಸಿದ ಹರ್ಷ್ 30 ಎಸೆತಗಳಲ್ಲಿ ತಲಾ 5 ಸಿಕ್ಸರ್ ಮತ್ತು ಬೌಂಡರಿ ನೆರವಿನಿಂದ 63 ರನ್ ಬಾರಿಸಿದರು. ಇವರ ವಿಕೆಟ್ ಪತನದೊಂದಿಗೆ ತಂಡದ ಸೋಲು ಕೂಡ ಖಚಿತಗೊಂಡಿತು. ಕರ್ನಾಟಕ ಪರ ಬೌಲಿಂಗ್‌ನಲ್ಲಿ ವಿ. ಕೌಶಿಕ್, ಪ್ರಸಿದ್ಧ್ ಕೃಷ್ಣ ಮತ್ತು ಅಭಿಲಾಷ್ ಶೆಟ್ಟಿ ತಲಾ ಮೂರು ವಿಕೆಟ್ ಕಿತ್ತರು.
ಮೊದಲು ಬ್ಯಾಟಿಂಗ್ ನಡೆಸಿದ ಕರ್ನಾಟಕ ಪರ ನಾಯಕ ಮಯಾಂಕ್ ಅಗರ್ವಾಲ್(31) ಮತ್ತು ದೇವದತ್ತ ಪಡಿಕ್ಕಲ್(8) ಈ ಪಂದ್ಯದಲ್ಲಿ ನಿರಾಸೆ ಮೂಡಿಸಿದರು. ಆದರೆ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾದ ಸ್ಮರಣ್ ರವಿಚಂದ್ರನ್ ಶತಕ ಬಾರಿಸಿದರೆ, ಕೃಷ್ಣನ್ ಶ್ರೀಜಿತ್ ಮತ್ತು ಅಭಿನವ್ ಮನೋಹರ್ ಅರ್ಧಶತಕ ಬಾರಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು. ಅಂತಿಮ ಹಂತದಲ್ಲಿ ಜಿದ್ದಿಗೆ ಬಿದ್ದವರಂತೆ ಬ್ಯಾಟ್ ಬೀಸಿದ ಕೃಷ್ಣನ್ ಶ್ರೀಜಿತ್(78) ಮತ್ತು ಅಭಿನವ್ ಮನೋಹರ್(79) ರನ್ ಬಾರಿಸಿದರು.