ಪ್ರಯಾಗ್‌ರಾಜ್: ಮಹಾಕುಂಭಮೇಳ ಎಂದಾಕ್ಷಣ ಮೊದಲು ನೆನಪಿಗೆ ಬರುವುದೇ ಮೈಗೆಲ್ಲಾ ಭಸ್ಮ ಹಚ್ಚಿಕೊಂಡಿರುವ ಅಘೋರಿಗಳು, ಚಿತ್ರ-ವಿಚಿತ್ರ ಉಡುಗೆ ತೊಡುಗೆಗಳಿಂದ ಮಿಂಚುತ್ತಿರುವ ಸಾಧುಗಳು, ತಮ್ಮದೇ ಆಧ್ಯಾತ್ಮಿಕ ಲೋಕದಲ್ಲಿ ಮುಳುಗಿರುವ ಸಂತರು. ಪ್ರತಿ ಬಾರಿಯ ಕುಂಭಮೇಳದಲ್ಲೂ ಇವರುಗಳೇ ಪ್ರಮುಖ ಆಕರ್ಷಣೆಯಾಗಿರುತ್ತಾರೆ. ಆದರೆ, ಈ ಬಾರಿ ಇವರೆಲ್ಲರಿಗಿಂತಲೂ ಮಿಗಿಲಾಗಿ ಜನರನ್ನು ಸೆಳೆಯುತ್ತಿರುವರು ಯಾರು ಗೊತ್ತಾ? ಮುತ್ತಿನ ಹಾರ ಮಾರುವ ಚೆಲುವೆ.
ನಿಜ, ಈ ಯುವತಿಯ ಹೆಸರು ಬಹುತೇಕ ಮಂದಿಗೆ ಗೊತ್ತಿಲ್ಲ. ಆಕೆ ಎಲ್ಲಿಯವಳೂ ಎಂಬುದೂ ತಿಳಿದಿಲ್ಲ. ಆದರೆ, ಕುಂಭಮೇಳ ನಡೆಯುತ್ತಿರುವ ಪ್ರಯಾಗ್‌ರಾಜ್‌ನಲ್ಲಿ ಹಾರಗಳನ್ನು ಮಾರುತ್ತಾ ಬದುಕಿನ ಬಂಡಿ ದೂಡುತ್ತಿರುವ ಈಕೆ ಈಗ “ಮಹಾಕುಂಭದ ಮೊನಾಲಿಸಾ’ ಎನಿಸಿಕೊಂಡಿದ್ದಾಳೆ. ಯಾರನ್ನಾದರೂ ತಕ್ಷಣವೇ ಸೆಳೆಯಬಲ್ಲ ಆಕರ್ಷಕ ಕಣ್ಣುಗಳು, ಗಿಣಿ ಮೂಗಿಗೆ ಸುಂದರ ಮೂಗುತಿ, ಕಿವಿಗೆ ಜುಮುಕಿ, ಕತ್ತಿನಲ್ಲಿ ನಾಲ್ಕೈದು ಮುತ್ತಿನ ಹಾರಗಳನ್ನು ತೊಟ್ಟಿರುವ ಈ ಕಪ್ಪುಸುಂದರಿ ಈಗ ಅಂತರ್ಜಾಲದಲ್ಲಿ ಸೆನ್ಸೇಷನ್ ಮೂಡಿಸುತ್ತಿದ್ದಾಳೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಚೆಲುವೆಯ ಫೋಟೋಗಳು ವೈರಲ್ ಆಗುತ್ತಿದೆ.

ಈಕೆಯ ಸೌಂದರ್ಯವು ಎಲ್ಲರನ್ನೂ ಆಕರ್ಷಿಸುತ್ತಿದ್ದು, ಕುಂಭಮೇಳದಲ್ಲಿ ಹಲವು ಮಂದಿ ಈಗ ಈಕೆಯನ್ನು ಸುತ್ತುವರಿದು ಮಾತನಾಡುತ್ತಿರುವ ವಿಡಿಯೋಗಳೂ ಅಪ್ ಲೋಡ್ ಆಗುತ್ತಿವೆ. ವಿಡಿಯೋಗಳಿಗೆ ಅನೇಕ ನೆಟ್ಟಿಗರು ಹೃದಯದ ಇಮೋಜಿಗಳನ್ನು ಹಾಕುವ ಮೂಲಕ, ‘ಬ್ಯೂಟಿಫುಲ್, ಪ್ರೆಟಿ, ವಾವ್, ಎಂಥಾ ಕಣ್ಣುಗಳು, ಬ್ಲ್ಯಾಕ್ ಬ್ಯೂಟಿ’ ಎನ್ನುವ ಮೂಲಕ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇನ್ನೂ ಕೆಲವರು, ಆಕೆಯನ್ನೇ ಹಿಂಬಾಲಿಸುವವರ ವರ್ತನೆ ಬಗ್ಗೆಯೂ ಕಿಡಿಕಾರಿದ್ದಾರೆ. ಅವಳು ಸೌಂದರ್ಯವತಿ ನಿಜ, ಹಾಗಂತೆ ಆಕೆಗೆ ತೊಂದರೆ ಕೊಡುವುದು ತಪ್ಪು ಎಂದೂ ಅಭಿಪ್ರಾಯಪಟ್ಟಿದ್ದಾರೆ.