ಬೆಂಗಳೂರು: ವರಿಷ್ಠರು ನನ್ನನ್ನೇ ರಾಜ್ಯಾಧ್ಯಕ್ಷರನ್ನಾಗಿ ಮುಂದುವರೆಸುವ ವಿಶ್ವಾಸವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಾನು ಕಳೆದ ಒಂದು ವರ್ಷದಿಂದ ಮಾಡಿರುವ ಹೋರಾಟ, ಪಕ್ಷ ಕಟ್ಟಿರುವ ಪರಿಶ್ರಮದ ಫಲವಾಗಿ ನನ್ನನ್ನೇ ಅಧ್ಯಕ್ಷರನ್ನಾಗಿ ಮುಂದುವರೆಸುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ನಮ್ಮದು ಆಂತರಿಕ ಪ್ರಜಾಪ್ರಭುತ್ವ ವ್ಯವಸ್ಥೆಯಿರುವ ಪಕ್ಷ. ಪಕ್ಷದ ಹಿರಿಯರು, ವರಿಷ್ಠರು ರಾಜ್ಯಾಧ್ಯಕ್ಷರನ್ನಾಗಿ ನನ್ನನ್ನು ಮಾಡಿದ್ದಾರೆ.
ಅಧ್ಯಕ್ಷರಾದ ನಂತರದಿಂದ ನಾನು, ಹಲವಾರು ಹೋರಾಟಗಳನ್ನು ಮಾಡಿದ್ದೇನೆ. ಆಡಳಿತ ಪಕ್ಷದ ಹಲವಾರು ಹಗರಣಗಳನ್ನು ಬಯಲಿಗೆ ತರುವ ಕಾರ್ಯ ಮಾಡಿದ್ದೇನೆ. ಹೀಗಾಗಿ ನನ್ನ ಅವಧಿಗೆ ವರಿಷ್ಠರು ಸಂತಸ ವ್ಯಕ್ತಪಿಡಿಸಿದ್ದಾರೆ. ಮುಂದಿನ ರಾಜ್ಯಾಧ್ಯಕ್ಷ ಚುನಾವಣೆಗೆ ಶಿವರಾಜ್ ಸಿಂಗ್ ಚೌಹಾಣ್(Shivraj Singh Chauhan) ಅವರೇ ಉಸ್ತುವಾರಿ ಆಗಿದ್ದಾರೆ. ಅತೀ ಶೀಘ್ರದಲ್ಲೇ ಯಾರನ್ನು ಅಧ್ಯಕ್ಷ ಮಾಡಬೇಕು ಅಂತ ಚೌಹಾಣ್ ಎಲ್ಲ ಹಿರಿಯರ ಜೊತೆಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.
ಮುಡಾ ಪ್ರಕರಣದ ಬಗ್ಗೆ ಮಾತನಾಡಿರುವ ಅವರು ಸಿಎಂ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಇಡಿ 300 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಮುಟ್ಟುಗೋಲು ಹಾಕಿಕೊಂಡಿದೆ. ಸಿಎಂ ತಮ್ಮ ಕುಟುಂಬಕ್ಕೆ14 ಸೈಟು ಪಡೆದುಕೊಂಡಿದ್ದಾರೆ. ಇದರಿಂದಾಗಿ ಮುಡಾಗೆ ಕೋಟಿ ಕೋಟಿ ರೂ. ನಷ್ಟವಾಗಿದೆ. ಅಕ್ರಮವಾಗಿ ಮುಡಾ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಇದರಿಂದಲೂ ಭಾರೀ ನಷ್ಟವಾಗಿದೆ. ಹೀಗಾಗಿ ಪ್ರಕರಣವನ್ನು ಹೊರ ಹಾಕಿದ ಸ್ನೇಹಮಯಿ ಕೃಷ್ಣಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.