ಬೆಂಗಳೂರು: ಎಚ್ ಎಎಲ್ ಠಾಣೆ ಪೊಲೀಸರು ರೋಚಕ ಪ್ರಕರಣವನ್ನು ಭೇದಿಸಿದ್ದಾರೆ. ಪಾಕಿಸ್ತಾನ ಮೂಲದವನನ್ನು ಎರಡನೇ ಮದುವೆಯಾಗಲು ಹೋದವಳು ಹೆಣವಾಗಿರುವ ಪ್ರಕರಣವನ್ನು ಈಗ ಪೊಲೀಸರು ಭೇದಿಸಿದ್ದಾರೆ.
ಜ. 1ರಂದು 45 ವರ್ಷದ ಮಹಿಳೆ ಉಜ್ಮಾ ಖಾನ್, ಕುಂದಲಹಳ್ಳಿ ಸ್ಪೈಸ್ ಗಾರ್ಡನ್ ದೀಪಂ ನಿವಾಸದ 6 ನೇ ಫ್ಲೋರ್ ನಲ್ಲಿ ಮಹಿಳೆ ಸಾವನ್ನಪ್ಪಿದ್ದರು. ಅಲ್ಲದೇ, 54 ವರ್ಷದ ಟೆಕ್ಕಿ ಇಮ್ದಾದ್ ಬಾಷಾ ವಿಷ ಸೇವಿಸಿ ಅಸ್ವಸ್ಥನಾಗಿದ್ದ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು, ಇಮ್ದಾದ್ ನನ್ನು ಆಸ್ಪತ್ರೆಗೆ ಸೇರಿಸಿ, ಮಹಿಳೆಯ ಮೃತದೇಹವನ್ನು ಮರಣೊತ್ತರ ಪರೀಕ್ಷೆಗೆ ಕಳುಹಿಸಿದ್ದರು. ಈ ಸಂದರ್ಭದಲ್ಲಿ ಇಮ್ದಾದ್ ಇಬ್ಬರೂ ವಿಷ ಸೇವಿಸಿರುವುದಾಗಿ ಹೇಳಿದ್ದ. ಹೀಗಾಗಿ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ತನಿಖೆ ಕೈಗೊಂಡ ಪೊಲೀಸರಿಗೆ ಸಾವಿನ ಸಮಯ ಮತ್ತು ಆತ ಮಾಡಿದ್ದ ಮೆಸೇಜ್ ಸಂಶಯ ಹುಟ್ಟು ಹಾಕಿತ್ತು. ಹೀಗಾಗಿ ಪೊಲೀಸರು ತನಿಖೆಯ ಹಾದಿ ಬದಲಾಯಿಸಿದ್ದರು. ಜ. 1ರಂದು ಮಧ್ಯಾಹ್ನ 12.30ಕ್ಕೆ ತನ್ನ ಸಂಬಂಧಿಕರಿಗೆ ಮೆಸೆಜ್ ಮಾಡಿದ್ದ ಇಮ್ದಾದ್, ನಾನು ಮತ್ತು ಉಜ್ಮಾ ಖಾನ್ ಪ್ರೀತಿ ಮಾಡುತ್ತಿದ್ದೇವೆ. ನಮ್ಮ ಎರಡನೇ ಮದುವೆಗೆ ನನ್ನ ಮೊದಲ ಪತ್ನಿ ಅಡ್ಡ ಬರುತ್ತಿದ್ದಾಳೆ. ಹೀಗಾಗಿ ಇಬ್ಬರು ವಿಷ ಸೇವಿಸಿ ಸಾಯುತ್ತಿದ್ದೇವೆ ಎಂದು ಮೆಸೆಜ್ ಮಾಡಿದ್ದ. ಇದನ್ನು ಗಮನಿಸಿದ ಸಂಬಂಧಿಕರೊಬ್ಬರು ಕೂಡಲೇ 112 ಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದರು.

ಪೊಲೀಸರು ಸ್ಥಳಕ್ಕೆ ಹೋಗುವಷ್ಟರಲ್ಲಿ ಉಜ್ಮಾ ಖಾನ್ ಸಾವನ್ನಪ್ಪಿದ್ದರೆ, ಇಮ್ದಾದ್ ಲೈಜಾಲ್ ಮತ್ತು ಹಾರ್ಪಿಕ್ ಬೆರೆಸಿ ಕುಡಿದಿದ್ದ. ನಂತರ ವೈದ್ಯಕೀಯ ಪರೀಕ್ಷೆ ನಡೆಸಿದ ಪೊಲೀಸರು, ಉಜ್ಮಾ ಖಾನ್ ಸಾವನ್ನಪ್ಪಿ 10 ರಿಂದ 12 ಗಂಟೆಯಾಗಿದೆ ಎಂದು ಹೇಳಿದ್ದಾರೆ. ಹೀಗಾಗಿ ಪೊಲೀಸರಿಗೆ ಇದು ಅಸಹಜ ಸಾವು ಅಲ್ಲ ಎಂಬುವುದು ಖಚಿತವಾಗಿದೆ.
ಇಮ್ದಾದ್ ಹಾಗೂ ಉಜ್ಮಾ ಖಾನ್ ಇಬ್ಬರು ಸಂಬಂಧಿಕರು.
ಮದುವೆಗೂ ಮುಂಚೆ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಅವರ ಪ್ರೀತಿಗೆ ಉಜ್ಮಾ ಖಾನ್ ಕುಟುಂಬಸ್ಥರು ಒಪ್ಪಿರಲಿಲ್ಲ. ಹೀಗಾಗಿ ಇಬ್ಬರು ಬೇರೆ ಬೇರೆ ಮದುವೆಯಾಗಿದ್ದರು. ಮದುವೆಯ ನಂತರ ಇಮ್ದಾದ್ ಮುಂಬಯಿನಲ್ಲಿ ವಾಸವಾಗಿದ್ದ. ಉಜ್ಮಾ ಬೆಂಗಳೂರಿನಲ್ಲಿ ಗಂಡನೊಂದಿಗೆ ವಾಸಿಸುತ್ತಿದ್ದಳು. ಆದರೆ, ಇತ್ತೀಚೆಗೆ ಉಜ್ಮಾ ಖಾನ್ ದಾಂಪತ್ಯದಲ್ಲಿ ಬಿರುಕು ಮೂಡಿತ್ತು. ಹೀಗಾಗಿ ಗಂಡನಿಂದ ವಿಚ್ಛೇದನ ಪಡೆದು ಒಂಟಿಯಾಗಿದ್ದಳು. ಆದರೆ, ಉಜ್ಮಾಳ ಮಗು ತಂದೆಯ ಜೊತೆಗೆ ಉಳಿದುಕೊಂಡಿತ್ತು.
ಇನ್ನೊಂದೆಡೆ ಮುಂಬಯಿನಲ್ಲಿದ್ದ ಇಮ್ದಾದ್ ಕೂಡ ಪತ್ನಿಯಿಂದ ವಿಚ್ಛೇದನ ಪಡೆದಿದ್ದ. ಹೀಗಾಗಿ ಈತ 2017ರಲ್ಲಿ ಮುಂಬಯಿನಿಂದ ಬೆಂಗಳೂರಿಗೆ ಬಂದಿದ್ದ. ಟೆಕ್ಕಿಯಾಗಿದ್ದ ಇಮ್ದಾದ್ ಥಣಿಸಂದ್ರದ ಶೋಭ ಅಪಾರ್ಟ್ ಮೆಂಟ್ ನ ಫ್ಲಾಟ್ ನಲ್ಲಿದ್ದ. ಬೆಂಗಳೂರಿನಲ್ಲಿ ಇಬ್ಬರೂ ಇದ್ದ ಹಿನ್ನೆಲೆಯಲ್ಲಿ ತೀರಾ ಹತ್ತಿರವಾಗಿದ್ದರು. ಅದೇ ಅಪಾರ್ಟ್ ಮೆಂಟ್ ನಲ್ಲಿ ಇಮ್ದಾದ್, ಉಜ್ಮಾಗಾಗಿ ಪ್ರತ್ಯೇಕ ಫ್ಲಾಟ್ ಖರೀದಿಸಿದ್ದ. ಹೀಗಾಗಿ ಇಬ್ಬರೂ ಒಂದಾಗಿದ್ದರು.
ಕಳೆದ 10 ತಿಂಗಳ ನಂತರ ಇಮ್ದಾದ್ ಮತ್ತೆ ಮುಂಬಯಿಗೆ ಹೋಗಿದ್ದಾನೆ. ಹೀಗಾಗಿ ಇಬ್ಬರೂ ಫ್ಲಾಟ್ ಖಾಲಿ ಮಾಡಿದ್ದರು. ಹೀಗಾಗಿ ಉಜ್ಮಾ, ಎಚ್ ಬಿಆರ್ ಲೇಔಟ್ ನಲ್ಲಿದ್ದ ತನ್ನ ತಾಯಿಯ ಮನೆ ಸೇರಿದ್ದಳು. ಆದರೆ, ಫೋನ್ ಸಂಪರ್ಕದಲ್ಲಿದ್ದರು. ಮತ್ತೆ ಇತ್ತೀಚೆಗೆ ಇಮ್ದಾದ್ ಬೆಂಗಳೂರಿಗೆ ಬಂದಿದ್ದ. ಕುಂದಲಹಳ್ಳಿ ಸ್ಪೈಸ್ ಗಾರ್ಡನ್ ನಲ್ಲಿ ಮನೆ ಮಾಡಿದ್ದ. ಆತನ ಮನೆಗೆ ಆಗಾಗ ಉಜ್ಮಾ ಹೋಗಿ ಬರುತ್ತಿದ್ದಳು. ಈ ಮಧ್ಯೆ ಉಜ್ಮಾ ಕುಟುಂಬಸ್ಥರು ಆಕೆಗೆ ಬೇರೆ ಮದುವೆ ಮಾಡಲು ನಿರ್ಧರಿಸಿದ್ದರು.
ಹೀಗಾಗಿ ಮ್ಯಾಟ್ರಿಮೋನಿ ವೆಬ್ ಸೈಟ್ ಮೂಲಕ ಆಸ್ಟ್ರೀಯ ದೇಶದಲ್ಲಿರುವ ಅರ್ಶದ್ ಎಂಬಾತನ ಸಂಪರ್ಕ ಮಾಡಲಾಗಿತ್ತು. ಮೂಲತಃ ಪಾಕಿಸ್ತಾನದವನಾದ ಅರ್ಶದ್, ಆಸ್ಟ್ರೀಯಾದಲ್ಲಿ ನೆಲೆಸಿದ್ದ. ಇದಕ್ಕೆ ಉಜ್ಮಾ ಕೂಡ ಒಪ್ಪಿಗೆ ಸೂಚಿಸಿದ್ದಳು. ಹೀಗಾಗಿ ಆತನೊಂದಿಗೂ ಫೋನ್ ಸಂಪರ್ಕದಲ್ಲಿದ್ದಳು. ಈ ಎಲ್ಲ ವಿಚಾರ ಇಮ್ದಾದ್ ಗೆ ಗೊತ್ತಾಗಿತ್ತು.

2024 ಡಿಸಂಬರ್ 31 ರಂದು ಉಜ್ಮಾಳನ್ನು ತನ್ನ ಮನೆಗೆ ಕರೆದಿದ್ದ. ಅಡುಗೆ ಮಾಡಿ ಅದರ ಫೋಟೋ ಕಳುಹಿಸಿ ಮನೆಗೆ ಬಾ ಎಂದಿದ್ದ. THAT LOOKS SIZZLING ಎಂದು ರಾತ್ರಿ 9.30ಕ್ಕೆ ಮನೆ ಹೋಗಿದ್ದ ಉಜ್ಮಾ ಜೊತೆ ಇಮ್ದಾದ್ ಕಿರಿಕ್ ಮಾಡಿದ್ದಾನೆ. ಹೀಗಾಗಿ ಇಬ್ಬರ ಮಧ್ಯೆ ಜೋರಾಗಿ ಗಲಾಟೆ ನಡೆದಿದೆ. ಅಕ್ಕಪಕ್ಕದವರು ಕಟ್ಟಡ ಮಾಲೀಕರಿಗೆ ದೂರು ಕೊಟ್ಟಿದ್ದಾರೆ. ಆಗ ಸೆಕ್ಯೂರಿಟಿ ಮನೆಯ ಬಳಿ ಬಂದು ಬಾಗಿಲು ತಟ್ಟಿದ್ದಾನೆ. ಆದರೆ, ಇಮ್ದಾದ್ ಬಾಗಿಲು ತೆಗೆದಿಲ್ಲ. ಆಗ ಸೆಕ್ಯೂರಿಟಿ ಸುಮ್ಮನಾಗಿದ್ದಾನೆ. ಮಾರನೇ ದಿನ ಜ. 1ರಂದು ಬೆಳಗ್ಗೆ 11ಕ್ಕೆ ಇಮ್ದಾದ್ ಮನೆಯಿಂದ ಹೊರ ಬಂದಿದ್ದಾನೆ. ಆನಂತರ ಸಾಯುವುದಾಗಿ ಮೆಸೆಜ್ ಇಮ್ದಾದ್ ಮೆಸೆಜ್ ಮಾಡಿದ್ದ. ಸದ್ಯ ಪ್ರಕಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.