ಮುಂಬೈ: ಟಿವಿ ಧಾರಾವಾಹಿ ಧರತಿಪುತ್ರ ನಂದಿನಿಯಲ್ಲಿ ಪ್ರಧಾನ ಪಾತ್ರ ನಿರ್ವಹಿಸುತ್ತಿದ್ದ ಕಿರುತೆರೆ ನಟ ಅಮನ್ ಜೈಸ್ವಾಲ್(23)(Aman Jaiswal) ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಮುಂಬೈನಲ್ಲಿ ನಡೆದಿದೆ. ಇಲ್ಲಿನ ಜೋಗೇಶ್ವರಿ ವೆಸ್ಟ್ ಪ್ರದೇಶದಲ್ಲಿ ಅಮನ್ ಸಂಚರಿಸುತ್ತಿದ್ದ ಬೈಕ್‌ಗೆ ಟ್ರಕ್‌ವೊಂದು ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಕೂಡಲೇ ಅವರನ್ನು ಕಾಮಾ ಆಸ್ಪತ್ರೆಯ (Kama Hospital) ಟ್ರಾಮಾ ವಾರ್ಡ್‌ಗೆ ದಾಖಲಿಸಲಾಯಿತಾದರೂ, ಅದಾದ 30 ನಿಮಿಷಗಳಲ್ಲೇ ಅವರು ಕೊನೆಯುಸಿರೆಳೆದರು ಎಂದು ವೈದ್ಯರು ತಿಳಿಸಿದ್ದಾರೆ. ಅಪಘಾತಕ್ಕೆ ಕಾರಣವಾದ ಟ್ರಕ್ ಅನ್ನು ಪೊಲೀಸರು(police) ವಶಕ್ಕೆ ಪಡೆದಿದ್ದು, ಚಾಲಕನನ್ನು ಬಂಧಿಸಿದ್ದಾರೆ. ಅಂಬೋಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಡಿಷನ್‍ವೊಂದರಲ್ಲಿ ಭಾಗವಹಿಸಲೆಂದು ಅಮನ್ ಜೈಸ್ವಾಲ್ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.

ಕೊನಯ ಇನ್ ಸ್ಟಾಗ್ರಾಂ ಪೋಸ್ಟ್‌ನಲ್ಲಿ ಏನಿತ್ತು?
ಅಮನ್ ಜೈಸ್ವಾಲ್ ಅವರು ತಮ್ಮ ಕೊನೆಯ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲೂ(Instagram post) ಧರತಿಪುತ್ರ ನಂದಿನಿ ಸೀರಿಯಲ್ ಬಗ್ಗೆ ಬರೆದುಕೊಂಡಿದ್ದರು. ಅದರಲ್ಲಿ, ಅವರು ತಮ್ಮ ಬದುಕಿನ ಪಯಣದ ಕುರಿತೂ ಬಹಿರಂಗಪಡಿಸಿದ್ದರು. ನಟನಾ ವೃತ್ತಿಗೆ ನಾನು ಬರುವುದು ಪೋಷಕರಿಗೆ ಸುತಾರಾಂ ಇಷ್ಟವಿರಲಿಲ್ಲ. ಕುಟುಂಬ ಸದಸ್ಯರ ವಿರೋಧದ ನಡುವೆಯೂ ನಾನು ಬಣ್ಣದ ಲೋಕ ಪ್ರವೇಶಿಸಿದೆ ಎಂದು ಹೇಳಿಕೊಂಡಿದ್ದರು. ಇದಲ್ಲದೇ, 2025ರ ಹೊಸ ವರ್ಷದಂದು ಅಮನ್ ಅವರು, “ಹೊಸ ಕನಸುಗಳು ಮತ್ತು ಅಪರಿಮಿತ ಸಾಧ್ಯತೆಗಳೊಂದಿಗೆ ನಾನು 2025ಕ್ಕೆ ಕಾಲಿಡುತ್ತಿದ್ದೇನೆ” ಎಂದು ಬರೆದುಕೊಂಡಿದ್ದರು. ಈ ಪೋಸ್ಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಉತ್ತರಪ್ರದೇಶದ ಬಲಿಯಾದವರಾದ ಅಮನ್ ಅವರು ಮಾಡೆಲ್ ಆಗಿ ವೃತ್ತಿ ಆರಂಭಿಸಿದವರು. ಉದಾರಿಯಾಂ ಎಂಬ ಜನಪ್ರಿಯ ಶೋ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಅವರಿಗೆ ಧರತಿಪುತ್ರ ನಂದಿನಿ ಧಾರಾವಾಹಿ ಭಾರೀ ಖ್ಯಾತಿ ತಂದುಕೊಟ್ಟಿತ್ತು. ಅವರಿಗೆ ಇನ್‌ಸ್ಟಾಗ್ರಾಂನಲ್ಲಿ 65 ಸಾವಿರ ಫಾಲೋವರ್‌ಗಳಿದ್ದಾರೆ. ಅಮನ್ ಸಾವಿನ ಸುದ್ದಿ ಕೇಳಿ ಇಡೀ ಚಿತ್ರರಂಗ ಆಘಾತಕ್ಕೊಳಗಾಗಿದೆ. ಸಾಮಾಜಿಕ ಜಾಲತಾಣಗಳಲ್ಲೂ ಅಭಿಮಾನಿಗಳು ನೆಚ್ಚಿನ ನಟನ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.