ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ (Saif Ali Khan) ಅವರ ಮನೆಗೆ ನುಗ್ಗಿ ಚಾಕುವಿನಿಂದ 6 ಬಾರಿ ಇರಿದಿದ್ದ ಪ್ರಕರಣಕ್ಕೆ ಸಂಬಂಧಿಸಿ ಮುಂಬೈ ಪೊಲೀಸರು ಶುಕ್ರವಾರ ಒಬ್ಬ ಶಂಕಿತನನ್ನು ವಶಕ್ಕೆ ಪಡೆದಿದ್ದಾರೆ. ಘಟನೆ ನಡೆದ ಬೆನ್ನಲ್ಲೇ ಕ್ಷಿಪ್ರ ಕಾರ್ಯಾಚರಣೆಗೆ ಇಳಿದಿರುವ ಪೊಲೀಸರು ವಿವಿಧ ತಂಡಗಳಾಗಿ ಎಲ್ಲೆಡೆ ಶೋಧ ಕಾರ್ಯ ನಡೆಸುತ್ತಿದ್ದು, ಭಾರೀ ಪ್ರಮಾಣದ ತಾಂತ್ರಿಕ ಸಾಕ್ಷ್ಯಗಳನ್ನು ಕಲೆಹಾಕಿ ದಾಳಿಕೋರನ ಬಂಧನಕ್ಕೆ ಬಲೆ ಬೀಸಿದ್ದಾರೆ. ಅದರಂತೆ, ಶುಕ್ರವಾರ ಬೆಳಗ್ಗೆ ಅಂದರೆ ಘಟನೆ ನಡೆದು ಸುಮಾರು 30 ಗಂಟೆಗಳ ಬಳಿಕ ಶಂಕಿತ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆಯಲಾಗಿದೆ.
ಸೈಫ್ ಅಲಿ ಖಾನ್ ಬಂಗಲೆಯಿಂದ ಪರಾರಿಯಾಗುತ್ತಿದ್ದಾಗ 6ನೇ ಮಹಡಿಯಲ್ಲಿ ಸಿಸಿಟಿವಿ ಕ್ಯಾಮೆರಾದಲ್ಲಿ ಆರೋಪಿಯ ಫೋಟೋ ಸೆರೆಯಾಗಿದೆ. ಈ ಫೋಟೋದಲ್ಲಿರುವ ವ್ಯಕ್ತಿಯನ್ನು ಹೋಲುವಂಥ ಒಬ್ಬ ಶಂಕಿತನನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ. ಆದರೆ, ಈತನೇ ದಾಳಿಕೋರ ಹೌದೋ, ಅಲ್ಲವೋ ಎನ್ನುವುದು ಇನ್ನೂ ದೃಢಪಟ್ಟಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಸೈಫ್ ಮೇಲಿನ ದಾಳಿಯ ಹಿಂದಿನ ಉದ್ದೇಶ ಏನು? ಸೈಫ್ ಮನೆಗೆ ತಲುಪಿದ್ದು ಹೇಗೆ? ಈ ದಾಳಿಯ ಹಿಂದೆ ಬೇರೆ ಯಾರದ್ದಾದರೂ ಕೈವಾಡ ಇದೆಯೇ ಎಂಬ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಂದ್ರಾ ಪೊಲೀಸ್ ಠಾಣೆಗೆ ಶಂಕಿತ ಆರೋಪಿಯನ್ನು ಪೊಲೀಸರು ಕರೆ ತರುತ್ತಿರುವ ವಿಡಿಯೋ ಬಹಿರಂಗವಾಗಿದೆ. ಗುರುವಾರ ರಾತ್ರಿ ಬಾಂದ್ರಾ ರೈಲು ನಿಲ್ದಾಣದ ಸಮೀಪ ಈತನನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯು ಘಟನಾ ಸ್ಥಳದಿಂದ ತಪ್ಪಿಸಿಕೊಂಡ ಬಳಿಕ ತನ್ನ ಗುರುತು ಮರೆಮಾಚಲು ಬಟ್ಟೆ ಬದಲಾಯಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ. ಪೊಲೀಸರ 20 ತಂಡವು ಕಾರ್ಯತತ್ಪರವಾಗಿದ್ದು, ತಾಂತ್ರಿಕ ಸಾಕ್ಷ್ಯಗಳನ್ನು ಸಂಗ್ರಹಿಸುವ ಮೂಲಕ ಹಾಗೂ ಮಾಹಿತಿದಾರರ ಸಹಾಯ ಪಡೆಯುವ ಮೂಲಕ ಆರೋಪಿಯ ಪತ್ತೆಗೆ ಬಲೆ ಬೀಸಿವೆ.
ಸೈಫ್ ಅವರ ಬಾಂದ್ರಾದ ಸತ್ಗುರು ಶರಣ್ ಬಂಗಲೆಗೆ ನುಗ್ಗಿದ್ದ ದಾಳಿಕೋರ, ಬುಧವಾರ ತಡರಾತ್ರಿ 2.30ರ ವೇಳೆಗೆ ಸೈಫ್ ಅಲಿ ಖಾನ್‌ಗೆ ಚೂರಿ ಇರಿದಿದ್ದ. ದುಷ್ಕರ್ಮಿಯೊಂದಿಗೆ ಬರಿಗೈಯ್ಯಲ್ಲಿ ಸೆಣಸಿದ್ದ ಸೈಫ್ ಅವರಿಗೆ ದೇಹದ 6 ಕಡೆ ಗಾಯಗಳಾಗಿದ್ದವು. ಅವರು ಪ್ರಸ್ತುತ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಖಾನ್ ಅವರ ಮನೆಗೆ ನುಗ್ಗಿದ್ದ ದರೋಡೆಕೋರ ಟಿ-ಶರ್ಟ್ ಮತ್ತು ಜೀನ್ಸ್ ಧರಿಸಿದ್ದ. ಸೈಫ್ ಮನೆಯ ಮೆಟ್ಟಿಲು ಇಳಿಯುವಾಗ ಆತನ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ಸೈಫ್ ಚೇತರಿಕೆ
ಸೈಫ್ ಅವರ ದೇಹದ 6 ಕಡೆ ಗಾಯಗಳಾಗಿದ್ದು, ಈ ಪೈಕಿ 2 ಕಡೆ ಆಳವಾದ ಗಾಯಗಳಾಗಿವೆ. ಅವರ ಬೆನ್ನುಹುರಿಯಲ್ಲಿ ಸಿಲುಕಿಕೊಂಡಿದ್ದ 2.5 ಇಂಚಿನ ಚಾಕುವಿನ ಪೀಸ್ ಅನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕಲಾಗಿದೆ. ಜೊತೆಗೆ ಬೆನ್ನುಹುರಿ ದ್ರವ ಸೋರಿಕೆಯನ್ನೂ ತಡೆಯಲಾಗಿದೆ. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಲೀಲಾವತಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.