ಉತ್ತರ ಕರ್ನಾಟಕದಲ್ಲಿನ (North Karnataka)ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾಗಿರುವ ಕೊಪ್ಪಳದ ಗವಿಸಿದ್ದೇಶ್ವರ ಮಠದ ಜಾತ್ರೆಗೆ ಲಕ್ಷಾಂತರ ಭಕ್ತರು ಪ್ರತಿ ವರ್ಷ ಹರಿದು ಬರುತ್ತಿರುತ್ತಾರೆ. ಹೀಗಾಗಿ ಭಿನ್ನ ವಿಭಿನ್ನ ಪ್ರಸಾದವನ್ನು ಭಕ್ತರಿಗಾಗಿ ಪ್ರತಿ ವರ್ಷ ಮಾಡಲಾಗುತ್ತಿರುತ್ತದೆ. ಈ ವರ್ಷವೂ ಅದೇ ರೀತಿ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ.
ಎರಡನೇ ದಿನ ಮಿರ್ಚಿ ಜಾತ್ರೆ(fair) ನಡೆಯಿತು. ಲಕ್ಷ ಲಕ್ಷ ಮಿರ್ಚಿ ತಯಾರು ಮಾಡಲಾಗಿದ್ದು, ಭಕ್ತರು ಸವಿದು, ಬಾಯಿ ಚಪ್ಪರಿಸಿದ್ದಾರೆ. ಕೊಪ್ಪಳದ ಗವಿಮಠದ ಜಾತ್ರೆ ದಕ್ಷಿಣ ಭಾರತದ ಕುಂಭಮೇಳ ಅಂತಲೇ ಪ್ರಸಿದ್ದಿ ಪಡೆದಿದೆ.
ಬುಧವಾರದಿಂದ ಜಾತ್ರೆ ಆರಂಭವಾಗಿದ್ದು, ರಥೋತ್ಸವದಲ್ಲಿ ಐದು ಲಕ್ಷಕ್ಕೂ ಹೆಚ್ಚು ಭಕ್ತರು ಭಾಗವಹಿಸಿದ್ದರು.
ಜಾತ್ರೆಯ ಎರಡನೇ ದಿನವನ್ನು ಭಕ್ತರು ಮಿರ್ಚಿ ಜಾತ್ರೆ ಅಂತಲೇ ಕರೆದಿದ್ದಾರೆ. ದಾಸೋಹದಲ್ಲಿ ಭಕ್ತರು ತಮಗೆ ಎಷ್ಟು ಬೇಕಾದಷ್ಟು ಮಿರ್ಚಿಯನ್ನು ಸವಿದಿದ್ದಾರೆ. ಊಟಕ್ಕೆ ಬರುವ ಭಕ್ತರಿಗೆ ಕೇಳಿದಷ್ಟು ಇಂದು ಮಿರ್ಚಿ ಬಜ್ಜಿಯನ್ನು ನೀಡಲಾಯಿತು. ಸ್ವತಃ ಗವಿಮಠದ ಸ್ವಾಮೀಜಿ, ಮಿರ್ಚಿ ಬಜ್ಜೆ ಹಾಕಿದ್ದು ವಿಶೇಷವಾಗಿತ್ತು.
ಮಿರ್ಚಿ ಬಜ್ಜಿ ದಾಸೋಹ ಹಿನ್ನೆಲೆಯಲ್ಲಿ, ಮುಂಜಾನೆ ಐದು ಗಂಟೆಯಿಂದಲೇ ಮಿರ್ಚಿ ಬಜ್ಜಿ ತಯಾರಿಕೆ ಆರಂಭಿಸಲಾಗಿತ್ತು. ಮಿರ್ಚಿ ತಯಾರಿಸಲು ಮಠದ ಮಿರ್ಚಿ ಭಕ್ತ ಮಂಡಳಿ ರಚಿಸಲಾಗಿದ್ದು, ಈ ಮಿರ್ಚಿ ಮಂಡಳಿಯವರು, ಕಳೆದ ಹತ್ತು ವರ್ಷಗಳಿಂದ ಜಾತ್ರೆಯ ಎರಡನೇ ದಿನ ಐದು ಲಕ್ಷಕ್ಕೂ ಹೆಚ್ಚು ಮಿರ್ಚಿಗಳನ್ನು ತಯಾರಿಸಿ, ಭಕ್ತರಿಗೆ ಪ್ರಸಾದಕ್ಕೆ ನೀಡುತ್ತಾರೆ. ಬೆಳಗ್ಗೆ ಐದು ಗಂಟೆಯಿಂದ ಮಿರ್ಚಿ ತಯಾರಿಕೆ ಆರಂಭಿಸಿದ್ದು, ರಾತ್ರಿ ಹನ್ನೆರಡು ಗಂಟೆಯವರಗೆ ಮಿರ್ಚಿ ತಯಾರಿಕೆ ನಡೆಯಲಿದೆ.
ಮಿರ್ಚಿ ತಯಾರಿಕೆಗೆ 25 ಕ್ವಿಂಟಲ್ ಹಸೆ ಕಡ್ಲಿ ಹಿಟ್ಟು, 22 ಕ್ವಿಂಟಲ್ ಹಸಿ ಮೆಣಸಿನಕಾಯಿ, ಹದಿನೈದು ಬ್ಯಾರಲ್ ಎಣ್ಣೆ, ಐವತ್ತು ಕಿಲೋ ಅಜವಾನ್, 60 ಸಿಲಿಂಡರ್ ಗಳನ್ನು ಇಟ್ಟುಕೊಳ್ಳಲಾಗಿದೆ. ಒಂದು ತಂಡದಲ್ಲಿ ನೂರು ಜನ ಮಿರ್ಚಿ ಮಾಡಲಿದ್ದು, ನಾಲ್ಕು ತಂಡಗಳು ಇಡೀ ದಿನ ಮಿರ್ಚಿ ತಯಾರಿಸುತ್ತಿವೆ. ಅಜ್ಜನ ದಾಸೋಹ ಕಂಡು ಭಕ್ತರು ಪುನೀತರಾಗುತ್ತಿದ್ದಾರೆ.