ಶಿವಮೊಗ್ಗ: ವೈದ್ಯೆ ಹಾಗೂ ನರ್ಸ್(doctor and nurse) ಮಧ್ಯೆ ಕರ್ತವ್ಯದ ವಿಚಾರಕ್ಕೆ ಗಲಾಟೆ ನಡೆದಿದ್ದು, ಇಬ್ಬರೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಅಲ್ಲದೇ, ಘಟನೆಯಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಬಿಆರ್‌ಪಿ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಡಾ.ಹಂಸವೇಣಿ ಮತ್ತು ನರ್ಸ್ ಸುಕನ್ಯಾ ಪರಸ್ಪರ ಕಿತ್ತಾಡಿಕೊಂಡು ಆತ್ಮಹತ್ಯೆಗೆ ಯತ್ನಿಸಿದವರು. ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಭದ್ರಾವತಿ ತಾಲೂಕಿನ ಬಿಆರ್ಪಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಾ. ಹಂಸವೇಣಿ ಮತ್ತು ಸ್ಟಾಪ್ ನರ್ಸ್ ಸುಕನ್ಯಾ ಸೇವೆ ಸಲ್ಲಿಸುತ್ತಿದ್ದರು. ನಾಲ್ಕು ವರ್ಷಗಳಿಂದ ಡಾ. ಹಂಸವೇಣಿ (Dr. Hamsaveni) ಅಲ್ಲಿ ಸೇವೆ ಸಲ್ಲಿಸಿದರೆ, ಸುಕನ್ಯಾ 8 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಆದರೆ, ಇತ್ತೀಚೆಗೆ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ತಲೆದೋರಿದೆ.
ನರ್ಸ್ ಸುಕನ್ಯಾ ಮತ್ತು ಇನ್ನಿತರ ಸಿಬ್ಬಂದಿಗಳು ಸೇರಿಕೊಂಡು ವೈದ್ಯೆಗೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ತನ್ನ ಪ್ರಭಾವ ಬಳಸಿಕೊಂಡಿ ನರ್ಸ್ ವೈದ್ಯೆಯನ್ನು ಬಿಆರ್ಪಿ ಸರಕಾರಿ ಆಸ್ಪತ್ರೆಯಿಂದ ಭದ್ರಾವತಿ ತಾಲೂಕಿನ ಸನ್ಯಾಸಿಕೋಡಿಮಗ್ಗ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಎತ್ತಂಗಡಿ ಮಾಡಿಸಿದ್ದಾಳೆ ಎನ್ನಲಾಗಿದೆ. ಕಳೆದ ಒಂದು ತಿಂಗಳಿನಿಂದ ವೈದ್ಯೆ ಇದೇ ಸರಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಎತ್ತಂಗಡಿ ಬಳಿಕವೂ ನರ್ಸ್ ಕಾಲ್ ಮಾಡಿ ವೈದ್ಯೆಗೆ ಅಪಹಾಸ್ಯ ಮಾಡುತ್ತಿದ್ದಳಂತೆ. ಹೇಗೆ ಬಿಆರ್ಪಿ ಆಸ್ಪತ್ರೆಯಿಂದ ಓಡಿಸಿದೆ ಅಂತಾ ಕಾಲ್ ಮಾಡಿ ಗೇಲಿ ಮಾಡುತ್ತಿದ್ದಳು ಎನ್ನಲಾಗಿದೆ.
ಹೀಗಾಗಿ ಮನನೊಂದ ವೈದ್ಯೆ ಇಂದು ಸನ್ಯಾಸಿಕೋಡಿಮಗ್ಗ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಾತ್ರೆಗಳು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ವೈದ್ಯೆಯನ್ನು ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಬಿಆರ್ ಪಿ ಆಸ್ಪತ್ರೆಯಲ್ಲಿ ನರ್ಸ್ ಸುಕನ್ಯಾ ಕೂಡ ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ವೈದ್ಯೆಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಹೀಗಾಗಿ ಈ ಪ್ರಕರಣ ಯಾವ ತಿರುವು ಪಡೆಯಲಿದೆ ಎಂಬುವುದನ್ನು ಕಾಯ್ದು ನೋಡಬೇಕಿದೆ.