ಬೆಂಗಳೂರು: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ವಿರುದ್ದ ಸಿಟಿ ರವಿ ( C.T. Ravi )ಅಶ್ಲೀಲ ಪದ ಬಳಕೆ ಮಾಡಿರುವ ಪ್ರಕರಣದ ವಿಚಾರಣೆ ಈಗಾಗಲೇ ನಡೆದಿದ್ದು, ಸಿಐಡಿ ವಿಚಾರಣೆ ಕೈಗೆತ್ತಿಕೊಂಡಿದೆ.
ಈ ಪ್ರಕರಣದಲ್ಲಿ ಸಾಕ್ಷಿದಾರರಾಗಿರುವ ವಿಪ ಸದಸ್ಯ ನಾಗರಾಜ್ ಯಾದವ್(Nagaraj Yadav) ಇಂದು ವಿಚಾರಣೆಗೆ ಹಾಜರಾಗಿದ್ದಾರೆ. ವಿಚಾರಣೆಗೆ ಆಗಮಿಸಬೇಕೆಂದು ಡಿವೈಎಸ್ಪಿ ಕೇಶವಮೂರ್ತಿ ನೋಟಿಸ್ ನೀಡಿದ್ದರು. ಅದರಂತೆ ಇಂದು ವಿಚಾರಣೆ ಎದುರಿಸಿದ್ದಾರೆ.
ಈ ವೇಳೆ ಮಾತನಾಡಿರುವ ವಿಪ ಸದಸ್ಯ ನಾಗರಾಜ್ ಯಾದವ್, ಘಟನೆಗೆ ಸಂಬಂಧಿಸಿದಂತೆ ಪ್ರತ್ಯಕ್ಷ ಸಾಕ್ಷಿ ನಾನು. ಸಿ.ಟಿ. ರವಿ ಆ ಪದ ಬಳಸಿರುವುದು ಸತ್ಯ. ನಾನು ಪ್ರತ್ಯಕ್ಷ ಸಾಕ್ಷಿಯಾಗಿ ಹೇಳುತ್ತೇನೆ. ಸಿ.ಟಿ. ರವಿ ಆ ಪದ ಬಳಕೆ ಮಾಡಿರುವುದು ಸತ್ಯ. ಅಲ್ಲದೇ, ಅನೇಕ ವಿಚಾರಗಳನ್ನು ಸಿಐಡಿ ಮುಂದೆ ಹೇಳಿದ್ದೇನೆ. ಆದರೆ, ಮಾಧ್ಯಮಗಳ ಮುಂದೆ ಎಲ್ಲವನ್ನೂ ಹೇಳಲು ಬರುವುದಿಲ್ಲ ಎಂದಿದ್ದಾರೆ.
ಬೆಳಗಾವಿ ಅಧಿವೇಶನದ ಕೊನೆಯ ದಿನ ದೊಡ್ಡ ಹೈಡ್ರಾಮ ನಡೆದಿತ್ತು. ಪರಿಷತ್ ನಲ್ಲಿ ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ನೀಡಿದ್ದ ಹೇಳಿಕೆಯ ಚರ್ಚೆಯ ಸಂದರ್ಭದಲ್ಲಿ ಗದ್ದಲ ಉಂಟಾಗಿದೆ. ಆಗ ಬಿಜೆಪಿ ಪರಿಷತ್ ಸದಸ್ಯ ಸಿ.ಟಿ ರವಿ ತಮ್ಮ ವಿರುದ್ಧ ಅಸಂವಿಧಾನಿಕ ಪದ ಬಳಕೆ ಮಾಡಿದ್ದಾರೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆರೋಪ ಮಾಡಿದ್ದರು. ಸಿಟಿ ರವಿ ಅವರ ಬಂಧನ(detention) ಕೂಡ ಆಗಿತ್ತು. ಇದು ದೊಡ್ಡ ರಾಜಕೀಯ ಸಂಘರ್ಷಕ್ಕೂ ಕಾರಣವಾಗಿದೆ. ಈಗ ಸಿಐಡಿ ಈ ಪ್ರಕರಣವನ್ನು ಕೈಗೆತ್ತಿಕೊಂಡಿದೆ.