ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯ ಕಾವು ತೀವ್ರಗೊಂಡಿರುವಂತೆಯೇ ಆಡಳಿತಾರೂಢ ಆಮ್ ಆದ್ಮಿ ಪಕ್ಷಕ್ಕೆ ಕೇಂದ್ರ ಸರ್ಕಾರ ಶಾಕ್ ಮೇಲೆ ಶಾಕ್ ನೀಡುತ್ತಿದೆ. ಬುಧವಾರ ಇನ್ನೇನು ನಾಮಪತ್ರ ಸಲ್ಲಿಕೆಗೆ ಅಣಿಯಾಗುತ್ತಿದ್ದಂತೆಯೇ ದಿಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ಪ್ರಾಸಿಕ್ಯೂಷನ್ ಗೆ ಕೇಂದ್ರ ಗೃಹ ಇಲಾಖೆ ಇ.ಡಿ.(ಜಾರಿ ನಿರ್ದೇಶನಾಲಯ)ಗೆ ಅನುಮತಿ ನೀಡಿದೆ. ಜೊತೆಗೆ, ಮಾಜಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ವಿರುದ್ಧವೂ ವಿಚಾರಣೆಗೆ ಸಮ್ಮತಿಸಲಾಗಿದೆ.
2-3 ದಿನಗಳ ಹಿಂದಷ್ಟೇ ಅಕ್ರಮ ಆಸ್ತಿ ಪ್ರಕರಣದಲ್ಲಿ ದೆಹಲಿಯ ಮಾಜಿ ಸಚಿವ, ಆಪ್ ನಾಯಕ ಸತ್ಯೇಂದ್ರ ಜೈನ್ ಪ್ರಾಸಿಕ್ಯೂಷನ್‌ಗೆ ಅನುಮತಿ ದೊರೆತಿರುವುದಾಗಿ ನ್ಯಾಯಾಲಯಕ್ಕೆ ಸಿಬಿಐ ಮಾಹಿತಿ ನೀಡಿತ್ತು.
ಮುಂದಿನ ಫೆಬ್ರವರಿ 5ರಂದು ದೆಹಲಿ ವಿಧಾನಸಭೆಗೆ ಚುನಾವಣೆ ನಡೆಯುತ್ತಿದ್ದು, ಕೇಜ್ರಿವಾಲ್ ಸೇರಿದಂತೆ ಆಪ್ ಪಡೆ ಭರ್ಜರಿ ಪ್ರಚಾರದಲ್ಲಿ ತೊಡಗಿರುವಂತೆಯೇ ಈ ಬೆಳವಣಿಗೆ ನಡೆದಿದೆ. ಈಗ ರದ್ದಾಗಿರುವ ದೆಹಲಿ ಅಬಕಾರಿ ನೀತಿ 2021-22ರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ಹಾಗೂ ಸಿಸೋಡಿಯಾರನ್ನು ವಿಚಾರಣೆಗೆ ಒಳಪಡಿಸಬಹುದು ಎಂದು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅನುಮತಿಸಿದ ಬೆನ್ನಲ್ಲೇ ಕೇಂದ್ರ ಗೃಹ ಸಚಿವಾಲಯವೂ ಪ್ರಾಸಿಕ್ಯೂಷನ್ ಗೆ ಒಪ್ಪಿಗೆ ನೀಡಿದೆ.
ವಿಶೇಷವೆಂದರೆ, ಕೇಜ್ರಿವಾಲ್ ಅವರು ಈ ಬಾರಿಯೂ ನವದೆಹಲಿ ಕ್ಷೇತ್ರದಿಂದ ಕಣಕ್ಕಿಳಿಯುತ್ತಿದ್ದು, ಇಂದೇ ನಾಮಪತ್ರ ಸಲ್ಲಿಸುವುದಾಗಿ ಘೋಷಿಸಿದ್ದರು. ನಾಮಪತ್ರ ಸಲ್ಲಿಕೆಗೆ ಕೆಲವು ಗಂಟೆಗಳಿರುವಂತೆಯೇ ಪ್ರಾಸಿಕ್ಯೂಷನ್ ಗೆ ಅನುಮತಿ ಸಿಕ್ಕಿರುವ ವಿಚಾರ ಬಹಿರಂಗಗೊಂಡಿದೆ.
ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣಗಳಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 218 ಅಡಿಯಲ್ಲಿ ಜನಪ್ರತಿನಿಧಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದರೆ ಜಾರಿ ನಿರ್ದೇಶನಾಲಯವು ಪೂರ್ವಾನುಮತಿ ಪಡೆಯಬೇಕು ಎಂದು ಸುಪ್ರೀಂ ಕೋರ್ಟ್ ನವೆಂಬರ್ 6ರಂದು ತೀರ್ಪು ನೀಡಿತ್ತು. ಅದರಂತೆ, ಈಗ ಆಪ್ ನಾಯಕರ ವಿಚಾರಣೆಗೆ ಇ.ಡಿ.ಗೆ ಹಸಿರು ನಿಶಾನೆ ದೊರೆತಂತಾಗಿದೆ. ಅಬಕಾರಿ ನೀತಿ ಹಗರಣದಲ್ಲಿ ಕೇಜ್ರಿವಾಲ್ ಅವರು ಪ್ರಮುಖ ಸಂಚುಕೋರ ಮತ್ತು ಕಿಂಗ್ ಪಿನ್ ಆಗಿದ್ದಾರೆ ಎಂದು ತನಿಖಾ ಸಂಸ್ಥೆ ಆರೋಪಿಸಿತ್ತು.
ಪ್ರಕರಣ ಸಂಬಂಧ 2024ರ ಮಾರ್ಚ್ 21ರಂದು ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿತ್ತು. ಹೊಸ ಅಬಕಾರಿ ನೀತಿಯನ್ನು ಪರಿಚಯಿಸಿದ್ದ ಆಪ್ ಸರ್ಕಾರವು ಎಲ್ಲ ನಿಯಮಗಳನ್ನು ಗಾಳಿಗೆ ತೂರಿ, ಕಿಕ್ ಬ್ಯಾಕ್ ಪಡೆದು ತನಗೆ ಬೇಕಾದ ಕಂಪನಿಗಳಿಗೆ ಪರವಾನಗಿ ನೀಡಿದೆ ಹಾಗೂ ಲಂಚ ಪಡೆದು ಲೈಸೆನ್ಸ್ ವಿತರಿಸಿದೆ. ಮದ್ಯ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡಲು 100 ಕೋಟಿ ರೂ. ಲಂಚ ಪಡೆದಿದ್ದ ಆಪ್, ಈ ಪೈಕಿ 45 ಕೋಟಿ ರೂ.ಗಳನ್ನು ಗೋವಾ ಚುನಾವಣಾ ಪ್ರಚಾರಕ್ಕೆ ಬಳಸಿದೆ ಎಂದು ಮೇ 17 ರಂದು ನ್ಯಾಯಾಲಯಕ್ಕೆ ಸಲ್ಲಿಸಲಾದ ಚಾರ್ಜ್‌ಶೀಟ್‌ನಲ್ಲಿ ಇ.ಡಿ. ಆರೋಪಿಸಿತ್ತು. ಒಟ್ಟಾರೆಯಾಗಿ ಆಪ್ 1,100 ಕೋಟಿ ಮೌಲ್ಯದ ಕಿಕ್ ಬ್ಯಾಕ್ ಪಡೆದಿದೆ ಎಂದೂ ಆರೋಪಿಸಿತ್ತು.