ಬರ್ಲಿನ್: ಜ್ವರ, ಹೊಟ್ಟೆನೋವು, ತಲೆನೋವು ಎಂದೆಲ್ಲ ನೆಪ ಹೇಳಿ ಆಫೀಸಿಗೆ ಚಕ್ಕರ್ ಹೊಡೆಯುವ ಉದ್ಯೋಗಿಗಳಿಗೆ ‘ಜ್ವರ’ ಬರಿಸುವ ಸುದ್ದಿ ಇದು. ಅನಾರೋಗ್ಯವಿದೆ ಎಂದು ಸುಳ್ಳು ಹೇಳಿ ಕಚೇರಿಗೆ ಗೈರಾಗುವ ಉದ್ಯೋಗಿಗಳ ನಿಜಬಣ್ಣವನ್ನು ಪತ್ತೇದಾರರು ಬಯಲು ಮಾಡುತ್ತಿದ್ದಾರೆ.
ಸಮಾಧಾನದ ಸಂಗತಿಯೆಂದರೆ, ಸದ್ಯಕ್ಕಂತೂ ಇದು ಜರ್ಮನಿಯ ಕಂಪನಿಗಳಲ್ಲಿ ಜಾರಿಯಾಗಿದೆಯೇ ಹೊರತು, ಭಾರತದಲ್ಲಲ್ಲ. ಆರ್ಥಿಕ ಸವಾಲುಗಳನ್ನು ಎದುರಿಸುತ್ತಿರುವ ಜರ್ಮನಿಯ ಕಂಪನಿಗಳು, ಕೆಲಸದಲ್ಲಿ ಆಸಕ್ತಿ ತೋರದ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ವಿವಿಧ ಯೋಜನೆಗಳನ್ನು ರೂಪಿಸುತ್ತಿವೆ. ಅದರಂತೆ, ಅನಾರೋಗ್ಯದ ರಜೆ(ಸಿಕ್ ಲೀವ್) ಪಡೆದು ಮನೆಯಲ್ಲಿರುವ ಉದ್ಯೋಗಿಗಳ ಆರೋಗ್ಯ ನಿಜಕ್ಕೂ ಸರಿಯಿಲ್ಲವೇ ಅಥವಾ ಅವರು ಸುಳ್ಳು ಹೇಳಿ ರಜೆ ಪಡೆದಿದ್ದಾರೆಯೇ ಎಂಬುದನ್ನು ಪತ್ತೆಹಚ್ಚಲು ಅನೇಕ ಕಂಪನಿಗಳು ಖಾಸಗಿ ಡಿಟೆಕ್ಟಿವ್ (ಪತ್ತೇದಾರರು)ಗಳ ಮೊರೆ ಹೋಗುತ್ತಿವೆಯಂತೆ.
ಪರಿಣಾಮವೆಂಬಂತೆ, ಫ್ರಾಂಕ್ ಫರ್ಟ್ ನಲ್ಲಿ ಡಿಟೆಕ್ಟಿವ್ ಏಜೆನ್ಸಿಗಳ ಸೇವೆಗಳಿಗೆ ಭಾರೀ ಬೇಡಿಕೆ ಬಂದಿವೆಯಂತೆ. ಕೆಲವು ವರ್ಷಗಳ ಹಿಂದಿನ ಕೇಸುಗಳಿಗೆ ಹೋಲಿಸಿದರೆ ಈಗ ನಮಗೆ ವರ್ಷಕ್ಕೆ 1200ಕ್ಕೂ ಅಧಿಕ ಕೇಸುಗಳು ಬರುತ್ತಿವೆ. ಹಲವು ಕಂಪನಿಗಳನ್ನು ನಮ್ಮನ್ನು ಸಂಪರ್ಕಿಸಿ, ಉದ್ಯೋಗಿಗಳ ಅನಾರೋಗ್ಯದ ಗುಟ್ಟು ಬಯಲು ಮಾಡುವ ಕೆಲಸಗಳನ್ನು ವಹಿಸುತ್ತಿವೆ ಎಂದು ಮಾರ್ಕಝ್ ಲೆನ್ಝ್ ಎಂಬ ಡಿಟೆಕ್ಟಿವ್ ಏಜೆನ್ಸಿ ಸ್ಥಾಪಕರು ಹೇಳಿದ್ದಾರೆ.
ಇನ್ನೊಂದೆಡೆ, ಕಂಪನಿಗಳ ಈ ಕ್ರಮಕ್ಕೆ ಭಾರೀ ಆಕ್ಷೇಪಗಳೂ ಕೇಳಿಬರತೊಡಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿಗಳು ವೈರಲ್ ಆಗುತ್ತಿದ್ದು, ಅನೇಕರು ಕಂಪನಿಗಳ ವಿರುದ್ಧ ತಿರುಗಿಬಿದ್ದಿದ್ದಾರೆ.
ಗಮನಾರ್ಹ ಸಂಗತಿಯೆಂದರೆ, ಜರ್ಮನಿಯಲ್ಲಿ ಇತ್ತೀಚೆಗೆ ಕೆಲಸಕ್ಕೆ ಗೈರಾಗುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಇದು ದೇಶದ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. 2023ರಲ್ಲಿ ಜರ್ಮನಿಯ ಪ್ರತಿ ಉದ್ಯೋಗಿಯು ಸರಾಸರಿ 15.1 ದಿನಗಳ ಅನಾರೋಗ್ಯ ರಜೆ ಪಡೆದಿದ್ದಾನೆ. 2021ರಲ್ಲಿ ಈ ಸಂಖ್ಯೆ 11.1 ದಿನಗಳಾಗಿತ್ತು. ಇದರಿಂದಾಗಿಯೇ 2023ರಲ್ಲಿ ದೇಶದ ಜಿಡಿಪಿ ಶೇ.0.8ರಷ್ಟು ಇಳಿಕೆಯಾಗಿದೆ ಎಂದು ಅಂದಾಜಿಸಲಾಗಿದೆ. ಕೊರೊನಾ ಸೋಂಕು ಹೆಚ್ಚಾಗಿದ್ದ ಅವಧಿಯಲ್ಲಿ ಉದ್ಯೋಗಿಗಳಿಗೆ ವೈದ್ಯಕೀಯ ಕಾರಣಗಳಿಗಾಗಿ ರಜೆ ಪಡೆಯುವ ನಿಯಮವನ್ನು ಸಡಿಲಿಸಲಾಗಿತ್ತು.
ಅಲ್ಪ ಪ್ರಮಾಣದ ರೋಗ ಲಕ್ಷಣ ಕಂಡುಬಂದರೂ ಫೋನ್ ಕರೆ ಮೂಲಕ ರಜೆ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ಈ ನಿಯಮವು ಈಗ ಅತಿಯಾಗಿ ದುರ್ಬಳಕೆಯಾಗುತ್ತಿದೆ ಎಂದು ಕಂಪನಿಗಳು ತಿಳಿಸಿವೆ.