ನವದೆಹಲಿ: ರಿಪಬ್ಲಿಕನ್(Republican) ಪಕ್ಷದ ನಾಯಕ ಡೊನಾಲ್ಡ್ ಟ್ರಂಪ್ ಅವರು ಜನವರಿ 20ರಂದು ಅಮೆರಿಕದ 47ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಲಿದ್ದು, ವಾಷಿಂಗ್ಟನ್ ಡಿಸಿಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಭಾರತದ ಪ್ರತಿನಿಧಿಯಾಗಿ ವಿದೇಶಾಂಗ ಸಚಿವ ಎಸ್. ಜೈಶಂಕರ್ (S. Jaishankar) ಭಾಗವಹಿಸಲಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಅಮೆರಿಕ ಭೇಟಿಯ ವೇಳೆ ಜೈಶಂಕರ್ ಅವರು ಟ್ರಂಪ್ ಆಡಳಿತದ ನಿಯೋಜಿತ ಪ್ರತಿನಿಧಿಗಳು ಮತ್ತು ಕಾರ್ಯಕ್ರಮಕ್ಕೆ ಆಗಮಿಸುವ ಇತರೆ ಗಣ್ಯರನ್ನು ಭೇಟಿಯಾಗಲಿದ್ದಾರೆ ಎಂದೂ ವಿದೇಶಾಂಗ ಇಲಾಖೆ ಪ್ರಕಟಣೆ ತಿಳಿಸಿದೆ. ಅಮೆರಿಕದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಕ್ಯಾಪಿಟಲ್ ಕಟ್ಟಡದ ಮುಂಭಾಗದಲ್ಲಿ ಟ್ರಂಪ್ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ. ಇದಾದ ಬಳಿಕ ಟ್ರಂಪ್ ದೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ನಿರ್ಗಮಿತ ಅಧ್ಯಕ್ಷರಾದ ಜೋ ಬೈಡೆನ್ ಅವರೂ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದು, ಅಧಿಕಾರ ಹಸ್ತಾಂತರಕ್ಕೆ ಸಾಕ್ಷಿಯಾಗಲಿದ್ದಾರೆ. ವಿಶೇಷವೆಂದರೆ, 2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲುಂಡಿದ್ದ ಟ್ರಂಪ್ ಅವರು, ಆಗ ಬೈಡೆನ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಹಾಜರಾಗಿರಲಿಲ್ಲ. ಟ್ರಂಪ್ 2017ರ ಜನವರಿಯಿಂದ 2021ರ ಜನವರಿವರೆಗೆ ಅಮೆರಿಕದ 45ನೇ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ಭಾಗವಹಿಸಲಿರುವ ವಿದೇಶಿ ಗಣ್ಯರು:
ಅರ್ಜೆಂಟೀನಾ ಅಧ್ಯಕ್ಷ ಜೇವಿಯರ್ ಮಿಲೈ, ಗ್ರೇಟ್ ಬ್ರಿಟನ್‌ನ ರಿಫಾರ್ಮ್ ಯುಕೆ ಪಕ್ಷದ ಮುಖ್ಯಸ್ಥ ನಿಗೆಲ್ ಫರಾಜ್, ಜಪಾನ್ ವಿದೇಶಾಂಗ ಸಚಿವ ಟಕೇಶಿ ಇವಾಯಾ, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ(Georgia Meloney) ಬ್ರೆಜಿಲ್ ಮಾಜಿ ಅಧ್ಯಕ್ಷ ಜೈರ್ ಬೋಲ್ಸೊನಾರೋ (Jair Bolsonaro) ಸೇರಿದಂತೆ ಹಲವು ಗಣ್ಯರು ಟ್ರಂಪ್ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಾಧ್ಯತೆಯಿದೆ. ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರಿಗೂ ಟ್ರಂಪ್‌ರಿಂದ ಆಹ್ವಾನ ಹೋಗಿದ್ದು, ಅವರು ತಮ್ಮ ಬದಲಾಗಿ ಪ್ರತಿನಿಧಿಯೊಬ್ಬರನ್ನು ಕಳುಹಿಸುವ ಸಾಧ್ಯತೆಯಿದೆ.
ಪ್ರಮಾಣ ವಚನ ಯಾವಾಗ?
ಟ್ರಂಪ್ ಪದಗ್ರಹಣ ಸಮಾರಂಭವು ಜ.20ರಂದು ಅಮೆರಿಕ ಕಾಲಮಾನ ಮಧ್ಯಾಹ್ನ 12.00 ಗಂಟೆಗೆ (ಭಾರತೀಯ ಕಾಲಮಾನ ರಾತ್ರಿ 10.30) ಆರಂಭವಾಗಲಿದೆ.