ನೋಯ್ಡಾ: ಮನೆಯಲ್ಲಿ ಗ್ಯಾಸ್ ಸ್ಟವ್ ಮೇಲೆ ಕಡಲೆಕಾಳು ಬೇಯಿಸಲು ಇಟ್ಟು, ನಿದ್ರೆಗೆ ಜಾರಿದ್ದ ಇಬ್ಬರು ಯುವಕರು ಕೆಲವು ಗಂಟೆಗಳಲ್ಲೇ ಶವವಾಗಿ ಪತ್ತೆಯಾಗಿದ್ದಾರೆ!
ಉತ್ತರಪ್ರದೇಶದ ನೋಯ್ಡಾದಲ್ಲಿ(Noida) ಈ ಘಟನೆ ನಡೆದಿದೆ. ಇಲ್ಲಿನ ಬಸಾಯಿ ಗ್ರಾಮದ ಬಾಡಿಗೆ ಮನೆಯಲ್ಲಿ ವಾಸವಿದ್ದ ಉಪೇಂದ್ರ (22) ಮತ್ತು ಶಿವಂ (23) ಛೋಲೆ ಬಟೂರೆ ಮತ್ತು ಕುಲ್ಚಾ ಮಾರುವ ಅಂಗಡಿ ಇಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದರು. ಶುಕ್ರವಾರ ರಾತ್ರಿ ಒಂದು ಪಾತ್ರೆ ಪೂರ್ತಿ ಕಡಲೆಕಾಳನ್ನು(peanuts) ಬೇಯಿಸಲು ಸ್ಟವ್ ಮೇಲೆ ಇಟ್ಟಿದ್ದ ಇವರಿಬ್ಬರೂ, ಗ್ಯಾಸ್ ಆಫ್(Gas off) ಮಾಡದೇ ನಿದ್ರೆಗೆ ಜಾರಿದ್ದರು. ಕಡಲೆಕಾಳು ಅತಿಯಾಗಿ ಬೇಯಲು ಆರಂಭವಾಗಿ, ಇಡೀ ಕೊಠಡಿ ತುಂಬಾ ಹೊಗೆ ಆವರಿಸಿತ್ತು. ಮನೆಯ ಬಾಗಿಲು ಕೂಡ ಮುಚ್ಚಿದ್ದ ಕಾರಣ, ಮನೆಯೊಳಗೆ ಆಮ್ಲಜನಕದ ಕೊರತೆ ಉಂಟಾಗಿದ್ದಲ್ಲದೆ, ಕೊಠಡಿಯಲ್ಲಿ ತುಂಬಿದ್ದ ಹೊಗೆಯು ಭಾರೀ ಪ್ರಮಾಣದ ಇಂಗಾಲದ ಮೋನಾಕ್ಸೈಡ್ ಅನಿಲವನ್ನು ಉತ್ಪತ್ತಿ ಮಾಡಿತ್ತು. ಮಲಗಿದ್ದಲ್ಲಿಯೇ ಈ ವಿಷಾನಿಲ ಸೇವಿಸಿ ಇಬ್ಬರು ಯುವಕರೂ ಅಸುನೀಗಿದ್ದಾರೆ ಎಂದು ನೋಯ್ಡಾ ಕೇಂದ್ರ ವಲಯದ ಪೊಲೀಸ್ ಉಪ ಆಯುಕ್ತರಾದ ರಾಜೀವ್ ಗುಪ್ತಾ (Rajeev Gupta) ತಿಳಿಸಿದ್ದಾರೆ.
ಇದಾದ ಕೆಲವು ಗಂಟೆಗಳ ಬಳಿಕ, ಈ ಮನೆಯಿಂದ ಹೊಗೆ ಬರುತ್ತಿರುವುದನ್ನು ಕಂಡ ನೆರೆಮನೆಯವರು, ಮನೆಯ ಬಾಗಿಲು ಮುರಿದು ಒಳನುಗ್ಗಿದಾಗ ಉಪೇಂದ್ರ ಮತ್ತು ಶಿವಂ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟರಲ್ಲಾಗಲೇ ಇಬ್ಬರ ಪ್ರಾಣಪಕ್ಷಿಯೂ ಹಾರಿಹೋಗಿತ್ತು. ಯುವಕರ ದೇಹದಲ್ಲಿ ಯಾವುದೇ ಗಾಯದ ಗುರುತುಗಳಿರಲಿಲ್ಲ. ವಿಷಾನಿಲವು ಮನೆ ತುಂಬಾ ತುಂಬಿಕೊಂಡ ಕಾರಣ, ಉಸಿರಾಡಲಾಗದೇ ಮೃತಪಟ್ಟಿರಬಹುದು ಎಂದು ವೈದ್ಯರು ಶಂಕಿಸಿದ್ದಾರೆ.
ಕಾರ್ಬನ್ ಮೋನಾಕ್ಸೈಡ್(ಇಂಗಾಲದ ಮೋನಾಕ್ಸೈಡ್),(Carbon monoxide) ಎನ್ನುವುದು ವಾಸನೆರಹಿತ ವಿಷಾನಿಲವಾಗಿದೆ. ಕಾರು, ಟ್ರಕ್, ಸ್ಟವ್, ಅವನ್, ಗ್ರಿಲ್, ಜನರೇಟರ್ ಮುಂತಾದವುಗಳಲ್ಲಿ ಇಂಧನ ಸುಡುವಾಗ ಇದು ಉತ್ಪತ್ತಿಯಾಗಿ ಹೊರಸೂಸಲ್ಪಡುತ್ತದೆ. ಮುಚ್ಚಿರುವ ಸ್ಥಳಗಳಲ್ಲಿ ಇದು ಹೆಚ್ಚಿನ ಪ್ರಮಾಣದಲ್ಲಿ ತುಂಬಿಕೊಳ್ಳುತ್ತದೆ. ಇದನ್ನು ಸೇವಿಸಿದ ಕ್ಷಣಮಾತ್ರದಲ್ಲೇ ಉಸಿರಾಟ ಸ್ಥಗಿತಗೊಳ್ಳುತ್ತದೆ. ಹೀಗಾಗಿ ಇದನ್ನು ಸೈಲೆಂಟ್ ಕಿಲ್ಲರ್ ಎಂದೂ ಕರೆಯುತ್ತಾರೆ.