ಧನ್‌ಬಾದ್: ‘ಪೆನ್ ಡೇ’ ಆಚರಿಸಿದರು ಎಂಬ ಕಾರಣಕ್ಕೆ ಶಾಲಾ ಪ್ರಾಂಶುಪಾಲರೊಬ್ಬರು 10ನೇ ತರಗತಿಯ 80 ವಿದ್ಯಾರ್ಥಿನಿಯರನ್ನು ಶರ್ಟ್ ಬಿಚ್ಚಿಸಿ ಮನೆಗೆ ಕಳುಹಿಸಿರುವ ಆಘಾತಕಾರಿ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.
ಇಲ್ಲಿನ ಧನ್ ಬಾದ್ ಜಿಲ್ಲೆಯ ಕರ್ಮಲ್ ಎಂಬ ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ ನಡೆದ ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಕೆಲವರು ಇದನ್ನು ತಾಲಿಬಾನ್ ಮಾದರಿ ಶಿಕ್ಷೆ ಎಂದು ಬಣ್ಣಿಸಿದ್ದಾರೆ. ಪ್ರಾಂಶುಪಾಲರ ನಡೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದ್ದಂತೆ, ಶಾಲಾ ಆಡಳಿತ ಮಂಡಳಿಯು ಈ ಕುರಿತು ತನಿಖೆಗೆ ಆದೇಶಿಸಿದೆ.
ಆಗಿದ್ದೇನು?:
ಧನ್ ಬಾದ್ ಜಿಲ್ಲೆಯ ಜೋರಾಪೋಖರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕರ್ಮಲ್ ಎಂಬ ಪ್ರತಿಷ್ಠಿತ ಪ್ರೌಢಶಾಲೆಯಿದೆ. ಇಲ್ಲಿ ಶನಿವಾರ ಪರೀಕ್ಷೆಗಳನ್ನು ಮುಗಿಸಿದ ಬಳಿಕ 10ನೇ ತರಗತಿಯ ವಿದ್ಯಾರ್ಥಿನಿಯರೆಲ್ಲರೂ ಸೇರಿ ಪರಸ್ಪರರ ಶರ್ಟ್‌ಗಳಲ್ಲಿ ಸಂದೇಶಗಳನ್ನು ಬರೆಯುವ ಮೂಲಕ ‘ಪೆನ್ ಡೇ’ ಆಚರಿಸುತ್ತಿದ್ದರು. ಇದನ್ನು ಕಂಡು ಕೆಂಡಾಮಂಡಲರಾದ ಶಾಲೆಯ ಪ್ರಾಂಶುಪಾಲರು, ಎಲ್ಲ ವಿದ್ಯಾರ್ಥಿನಿಯರಿಗೂ ಅಂಗಿ ಬಿಚ್ಚುವಂತೆ ಆದೇಶಿಸಿದ್ದಾರೆ.
ವಿದ್ಯಾರ್ಥಿನಿಯರು ಇದೊಂದು ಬಾರಿ ಕ್ಷಮಿಸಿಬಿಡಿ ಎಂದು ಗೋಗರೆದರೂ ಕೇಳದ ಪ್ರಾಂಶುಪಾಲರು, ಎಲ್ಲರ ಅಂಗಿಯನ್ನು ಬಿಚ್ಚಿಸಿಯೇ ಎಲ್ಲ 80 ವಿದ್ಯಾರ್ಥಿನಿಯರನ್ನೂ ಮನೆಗೆ ಕಳುಹಿಸಿದ್ದಾರೆ. ಕೊನೆಗೆ ವಿದ್ಯಾರ್ಥಿನಿಯರು ಶರ್ಟ್ ಗಳನ್ನು ಬಿಚ್ಚಿ, ಕೇವಲ ಬ್ಲೇಜರ್‌ನೊಂದಿಗೆ ಮನೆಗೆ ಮರಳಿದ್ದಾರೆ. ಮನೆಗೆ ಬಂದು ಪೋಷಕರಲ್ಲಿ ತಿಳಿಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ.
ಘಟನೆಯಿಂದ ಆಕ್ರೋಶಿತರಾದ ಹೆತ್ತವರು ಈ ಕುರಿತು ಶಾಲಾ ಆಡಳಿತ ಮಂಡಳಿಗೆ ದೂರು ನೀಡಿದ್ದು. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಆಡಳಿತ ಮಂಡಳಿ, ಈ ಬಗ್ಗೆ ತನಿಖೆಗೆ ಆದೇಶಿಸಿದೆ. ತನಿಖೆಗೆ ವಿಶೇಷ ಸಮಿತಿಯನ್ನೂ ರಚಿಸಿದೆ. ಸಮಿತಿಯಲ್ಲಿ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್, ಜಿಲ್ಲಾ ಶಿಕ್ಷಣ ಅಧಿಕಾರಿ, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಮತ್ತು ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಇರಲಿದ್ದಾರೆ. ಸಮಿತಿಯ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಧನ್‌ಬಾದ್ ಜಿಲ್ಲಾಧಿಕಾರಿ ಮಾಧವಿ ಮಿಶ್ರಾ ತಿಳಿಸಿದ್ದಾರೆ.
ಇದೇ ವೇಳೆ, ಭಾನುವಾರ ಘಟನೆ ಬಗ್ಗೆ ಪ್ರತಿಕ್ರಿಯೆಸಿರುವ ಪ್ರಾಂಶುಪಾಲರು, ಇಂಥ ಘಟನೆ ನಡೆದೇ ಇಲ್ಲ, ಎಲ್ಲವೂ ಸುಳ್ಳು ಆರೋಪ ಎಂದಿದ್ದಾರೆ. ಇನ್ನೊಂದೆಡೆ, ತನಿಖಾ ಸಮಿತಿಯು ಶಾಲೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವುದಾಗಿಯೂ ತಿಳಿಸಿದೆ.
ತನಿಖೆಯ ಬಳಿಕವೇ ಘಟನೆ ಬಗ್ಗೆ ನಿಖರ ವಿವರ ತಿಳಿದುಬರಲಿದೆ. ಕರ್ಮಲ್ ಶಾಲೆಯ ಪ್ರಾಂಶುಪಾಲರು ವಿದ್ಯಾರ್ಥಿನಿಯರಿಗೆ ತಾಲಿಬಾನ್ ಮಾದರಿಯ ಶಿಕ್ಷೆ ವಿಧಿಸಿರುವುದು ನಾಚಿಕೆಗೇಡಿನ ಹಾಗೂ ಆಘಾತಕಾರಿ ಸಂಗತಿಯಾಗಿದೆ ಎಂದು ಶಾಲಾಭಿವೃದ್ಧಿ ಸಮಿತಿಯ ಸದಸ್ಯ ರಾಜೇಶ್ ಕುಮಾರ್ ಹೇಳಿದ್ದಾರೆ.