ಬೆಂಗಳೂರು: 16 ಸುತ್ತು ಗುಂಡು ಹಾರಿಸಿ ಮೂವರ ಕೊಲೆ ಕಾರಣವಾಗಿದ್ದ ಶಾರ್ಪ್ ಶೂಟರ್ಸ್ ನ್ನು ಬೆಂಗಳೂರಿನಲ್ಲಿ ದೆಹಲಿ ಸ್ಪೆಷಲ್ ಬ್ರ್ಯಾಂಚ್ ಪೊಲೀಸರು ಸಿನಿಮಾ ಸ್ಟೈಲ್ ನಲ್ಲಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.
16 ಸುತ್ತು ಗುಂಡು ಹಾರಿಸಿ ಮೂವರನ್ನು ಕೊಲೆ ಮಾಡಿದ್ದ ಶಾರ್ಪ್ ಶೂಟರ್ಸ್ ಬಲೆಗೆ ಬೀಳಿಸಿಕೊಳ್ಳುವ ಕಾರ್ಯಾಚರಣೆ 23 ದಿನಗಳ ಕಾಲ ನಡೆದಿತ್ತು. ಕೊನೆಗೂ ದೆಹಲಿ ಸ್ಪೆಷಲ್ ಬ್ರಾಂಚ್ ಪೊಲೀಸರ ಕಾರ್ಯಾಚರಣೆ ಬೆಂಗಳೂರಿನಲ್ಲಿ ಸಕ್ಸಸ್ ಆಗಿದೆ. ಡಿ. 23ರಂದು ದೆಹಲಿಯ ಪಂಚಕುಲದಲ್ಲಿ 16 ಸುತ್ತು ಗುಂಡು ಹಾರಿಸಿ ಮೂವರನ್ನು ಕೊಲೆ ಮಾಡಲಾಗಿತ್ತು.
ಬರ್ತಡೇ ಪಾರ್ಟಿಗೆ ಹೋಗಿದ್ದ ಮೂವರನ್ನು ಹೋಟೆಲ್ ಆವರಣದಲ್ಲಿ ಕೊಲೆ ಮಾಡಲಾಗಿತ್ತು. ದೆಹಲಿಯ ಮೋಸ್ಟ್ ವಾಂಟೆಡ್ ಗ್ಯಾಂಗ್ ಸ್ಟರ್ ಸಾಂಗ್ವಾನ್ ಅಲಿಯಾಸ್ ನಂದು ಈ ಕೊಲೆ ಮಾಡಿಸಿದ್ದ. ಸಾಹಿಲ್ ಹಾಗೂ ವಿಜಯ್ ಗೆಹ್ಲೋತ್ ಮನಸೋ ಇಚ್ಛೆ ಗುಂಡು ಹಾರಿಸಿ ಶೂಟ್ ಮಾಡಿದ್ದರು. ಈ ಇಬ್ಬರನ್ನು ದೆಹಲಿ ಸ್ಪೆಷಲ್ ಬ್ರಾಂಚ್ ಪೊಲೀಸರು ರಾಜಧಾನಿಯ ಅಶೋಕನಗರ ಠಾಣಾ ವ್ಯಾಪ್ತಿಯಲ್ಲಿ ಬಂಧಿಸಿದ್ದಾರೆ.
ಶೂಟೌಟ್ ಮಾಡಿದ ನಂತರ ದೆಹಲಿಯಿಂದ ವಿವಿಧ ರಾಜ್ಯಗಳನ್ನು ಸುತ್ತಿ ಕೊನೆಗೆ ಬೆಂಗಳೂರು ಸೇರಿದ್ದರು. ಸಿಲಿಕಾನ್ ಸಿಟಿಯಲ್ಲಿ ಅಶೋಕನಗರ ಠಾಣಾ ವ್ಯಾಪ್ತಿಯಲ್ಲಿನ ಹೋಟೆಲ್ ಸೇರಿದ್ದರು. ಖಚಿತ ಮಾಹಿತಿ ಪಡೆದಿದ್ದ ದೆಹಲಿ ಪೊಲೀಸರು, ಸಿನಿಮೀಯ ರೀತಿಯಲ್ಲಿ ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.