ಕೇರಳದಲ್ಲಿ ಆಘಾತಕಾರಿ ಘಟನೆ: 13 ವರ್ಷದವಳಿದ್ದಾಗಲೇ ಅಥ್ಲೀಟ್‌ಗೆ ಲೈಂಗಿಕ ಕಿರುಕುಳ
ಕೋಚ್, ಇತರೆ ಕ್ರೀಡಾಳುಗಳಿಂದಲೂ ಕುಕೃತ್ಯ: ಘಟನೆ ಬಗ್ಗೆ ಎಸ್ಐಟಿ ತನಿಖೆ ಆರಂಭ
ತಿರುವನಂತಪುರಂ: 18 ವರ್ಷದ ದಲಿತ ಅಥ್ಲೀಟ್ ಮೇಲೆ 60ಕ್ಕೂ ಅಧಿಕ ಪುರುಷರು ಸತತ 5 ವರ್ಷಗಳ ಕಾಲ ಲೈಂಗಿಕ ಕಿರುಕುಳ ನೀಡಿರುವ ಆಘಾತಕಾರಿ ಘಟನೆಯೊಂದು ಕೇರಳದಲ್ಲಿ ಬೆಳಕಿಗೆ ಬಂದಿದೆ.
ಅಚ್ಚರಿಯೆಂದರೆ, ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ರಾಕ್ಷಸರ ಪೈಕಿ ಆ ಬಾಲಕಿಯ ಕೋಚ್ ಹಾಗೂ ಇತರೆ ಕ್ರೀಡಾಳುಗಳೂ ಸೇರಿದ್ದಾರೆ. ಘಟನೆ ಸಂಬಂಧ ಕೇರಳದ ಪಟ್ಟಣಂತಿಟ್ಟ ಪೊಲೀಸರು 4 ಎಫ್ಐಆರ್ ದಾಖಲಿಸಿ, 5 ಮಂದಿಯನ್ನು ಬಂಧಿಸಿದ್ದಾರೆ.
ಇತ್ತೀಚೆಗೆ ಮಹಿಳಾ ಸಾಮಖ್ಯ ಎಂಬ ಎನ್‌ಜಿಒವೊಂದರ ಸದಸ್ಯರು ಫೀಲ್ಡ್ ವಿಸಿಟ್‌ಗೆಂದು ಹೋದಾಗ ಸಂತ್ರಸ್ತ ಯುವತಿಯ ಮನೆಗೂ ಭೇಟಿ ನೀಡಿತ್ತು. ಈ ವೇಳೆ ಸದಸ್ಯರೊಂದಿಗೆ ಮನಬಿಚ್ಚಿ ಮಾತನಾಡಿದ್ದ ಯುವತಿ, ತನ್ನ ಮೇಲಾದ ಕ್ರೌರ್ಯಗಳನ್ನು ಬಿಚ್ಚಿಟ್ಟಿದ್ದಾಳೆ. ಕೂಡಲೇ ಮಹಿಳಾ ಸಾಮಖ್ಯದ ಸದಸ್ಯರು ರಾಜ್ಯ ಮಕ್ಕಳ ಹಿತರಕ್ಷಣಾ ಸಮಿತಿ(ಸಿಡಬ್ಲ್ಯುಸಿ)ಗೆ ಮಾಹಿತಿ ಮುಟ್ಟಿಸಿದ್ದರು. ಸಮಿತಿಯು ಮನಶ್ಶಾಸ್ತ್ರಜ್ಞರೊಬ್ಬರನ್ನು ಕರೆದುಕೊಂಡು ಬಂದು ಯುವತಿಗೆ ಕೌನ್ಸೆಲಿಂಗ್ ಕೊಡಿಸಿತ್ತು. ಈ ವೇಳೆ ಆಕೆ ತನ್ನ ಮೇಲೆ 64 ಮಂದಿ ಲೈಂಗಿಕ ದೌರ್ಜನ್ಯ ಎಸಗಿದ್ದನ್ನು ಬಾಯಿಬಿಟ್ಟಿದ್ದಾಳೆ.
13 ವರ್ಷದವಳಿದ್ದಾಗಲೇ ಕಿರುಕುಳ ಆರಂಭ:
ಸಂತ್ರಸ್ತೆಯು 13 ವರ್ಷದವಳಿದ್ದಾಗಲೇ, ನೆರೆಮನೆಯ ವ್ಯಕ್ತಿಯೊಬ್ಬ ಆಕೆಗೆ ಅಶ್ಲೀಲ ವಿಡಿಯೋಗಳನ್ನು ಒತ್ತಾಯಪೂರ್ವಕವಾಗಿ ತೋರಿಸಿ ಹಿಂಸಿಸಲು ಆರಂಭಿಸಿದ್ದ. ಇದಾದ ಬಳಿಕ ಒಂದು ದಿನ ನಿರ್ಜನ ಗುಡ್ಡವೊಂದಕ್ಕೆ ಕರೆದೊಯ್ದು, ಲೈಂಗಿಕ ಕಿರುಕುಳ ನೀಡಿದ್ದ. ನಂತರ, ಆತನ ಸ್ನೇಹಿತರನ್ನೂ ಕರೆತಂದು ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ. ಬಾಯಿಬಿಟ್ಟರೆ ಸುಮ್ಮನಿರಲ್ಲ ಎಂದೂ ಎಚ್ಚರಿಸಿದ್ದ. ಶಾಲೆಯಲ್ಲಿ ಕ್ರೀಡೆಯಲ್ಲಿ ಸಕ್ರಿಯಳಾಗಿದ್ದ ಕಾರಣ, ಬಾಲಕಿಯು ಕ್ರೀಡಾ ತರಬೇತಿಯಲ್ಲೂ ಭಾಗವಹಿಸುತ್ತಿದ್ದಳು. ಈ ವೇಳೆ, ಕೋಚ್ ಸೇರಿದಂತೆ ಇತರೆ ಕ್ರೀಡಾಳುಗಳು ಕೂಡ ಆಕೆಯನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಕೆಲವರಂತೂ ಆಕೆಯ ವಿಡಿಯೋಗಳನ್ನು ತೋರಿಸಿ, ಬಹಿರಂಗಪಡಿಸುವುದಾಗಿ ಬೆದರಿಸಿ ತಮ್ಮ ಕೃತ್ಯಗಳನ್ನು ಮುಂದುವರಿಸಿದ್ದರು ಎಂದೂ ಯುವತಿ ಹೇಳಿದ್ದಾಳೆ.
ವಿಶೇಷ ತಂಡ ರಚನೆ:
ಮಕ್ಕಳ ಕ್ಷೇಮಾಭಿವೃದ್ಧಿ ಸಮಿತಿಯ ದೂರಿನ ಮೇರೆಗೆ ಪಟ್ಟಣಂತಿಟ್ಟ ಜಿಲ್ಲಾ ಪೊಲೀಸ್ ಮುಖ್ಯಸ್ಥ ವಿ.ಜಿ. ವಿನೋದ್ ಕುಮಾರ್ ಅವರು, ಘಟನೆ ಬಗ್ಗೆ ತನಿಖೆಗೆ ವಿಶೇಷ ತಂಡ ರಚಿಸಿದ್ದಾರೆ. ಪ್ರಾಥಮಿಕ ತನಿಖೆಯ ಆಧಾರದಲ್ಲಿ, 62 ಮಂದಿಯನ್ನು ಆರೋಪಿಗಳೆಂದು ಗುರುತಿಸಲಾಗಿದೆ. ಈ ಪೈಕಿ 40 ಮಂದಿಯ ವಿರುದ್ಧ ಪೋಕ್ಸೋ(ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ ಕಾಯ್ದೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಈಗಾಗಲೇ ಸುಬಿನ್, ಎಸ್.ಸಂದೀಪ್, ವಿ.ಕೆ.ವಿನೀತ್, ಕೆ. ಆನಂದು ಮತ್ತು ಶ್ರೀನಿ ಎಂಬವರನ್ನು ಬಂಧಿಸಲಾಗಿದೆ.