ನವದೆಹಲಿ: ತಮ್ಮ ಪತ್ನಿ ಹಾಗೂ ಖ್ಯಾತ ಕೊರಿಯಾಗ್ರಫರ್ ಧನಶ್ರೀ ವರ್ಮಾ ಅವರೊಂದಿಗೆ ವಿಚ್ಛೇದನದ ವದಂತಿ ಬಗ್ಗೆ ಭಾರತ ಕ್ರಿಕೆಟ್ ತಂಡದ ಸ್ಪಿನ್ನರ್ ಯುಜ್ವೇಂದ್ರ ಚಹಲ್ (Yuzvendra Chahal) ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ನಲ್ಲಿ ವಿಚ್ಛೇದನ ವದಂತಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ನಡುವೆ ಯಾವುದೇ ರೀತಿಯ ವಿಚ್ಛೇದನ ಪ್ರಕ್ರಿಯೆ ನಡೆದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಕಳೆದ ಹಲವು ದಿನಗಳ ಹಿಂದೆ ಯುಜ್ವೇಂದ್ರ ಚಹಲ್ ಹಾಗೂ ಧನಶ್ರೀ ವರ್ಮ(Dhanshree Verma) ಪರಸ್ಪರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅನ್‌ಫಾಲೋ ಮಾಡಿದ್ದರು. ವಿಷಯ ಬಹಿರಂಗವಾಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಯುಜ್ವೇಂದ್ರ ಚಹಲ್ ಮತ್ತು ಧನಶ್ರೀ ವರ್ಮಾ ದಂಪತಿ ವಿಚ್ಛೇದನ ಪಡೆದಿದ್ದಾರೆಂದು ಚರ್ಚೆಗಳು ನಡೆದಿದ್ದವು.
ಚಹಲ್ ತಮ್ಮ ಇನ್‌ಸ್ಟಾಗ್ರಾಮ್ (Instagram) ಸ್ಟೋರಿಯಲ್ಲಿ . “ನನ್ನ ಎಲ್ಲಾ ಅಭಿಮಾನಿಗಳ ಅಚಲವಾದ ಪ್ರೀತಿ ಮತ್ತು ಬೆಂಬಲಕ್ಕಾಗಿ ನಾನು ಅವರಿಗೆ ಕೃತಜ್ಞನಾಗಿದ್ದೇನೆ, ಈ ಪಯಣ ಸುದೀರ್ಘವಾದದ್ದು. ನನ್ನ ತಂಡ ಮತ್ತು ನನ್ನ ಅಭಿಮಾನಿಗಳಿಗಾಗಿ ಇನ್ನೂ ಅನೇಕ ನಂಬಲಾಗದ ಸಾಧನೆಗಳು ಇವೆ. ನಾನು ಒಬ್ಬ ಕ್ರೀಡಾಪಟು ಎಂದು ಹೆಮ್ಮೆಪಡುತ್ತಿರುವಾಗ, ನಾನೊಬ್ಬ ಮಗ, ಸಹೋದರ ಮತ್ತು ಸ್ನೇಹಿತ ಎಂಬುದನ್ನು ಮರೆಯಬಾರದು. ಇತ್ತೀಚಿನ ಕೆಲ ಕುತೂಹಲಕಾರಿ ಬೆಳವಣಿಗೆಯನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಇದು ವಿಶೇಷವಾಗಿ ನನ್ನ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದೆ. ಆದಾಗ್ಯೂ, ಕೆಲವು ಸೋಶಿಯಲ್ ಮೀಡಿಯಾ ಪೋಸ್ಟ್‌ಗಳನ್ನು ಗಮನಿಸಿದ್ದೇನೆ. ಎಲ್ಲವೂ ನಿಜವಾಗಿರಬಹುದು ಅಥವಾ ಸುಳ್ಳಾಗಿರಬಹುದು,” ಎಂದು ತಮ್ಮ ಸ್ಟೋರಿಯಲ್ಲಿ ಬರೆದಿದ್ದಾರೆ.

“ಮಗನಾಗಿ, ಸಹೋದರನಾಗಿ ಮತ್ತು ಸ್ನೇಹಿತನಾಗಿ, ನಾನು ಎಲ್ಲರಿಗೂ ಈ ಊಹಾಪೋಹಗಳಿಗೆ ಒಳಗಾಗಬೇಡಿ ಎಂದು ವಿನಮ್ರವಾಗಿ ವಿನಂತಿಸುತ್ತೇನೆ. ಏಕೆಂದರೆ ಇದು ನನಗೆ ಮತ್ತು ನನ್ನ ಕುಟುಂಬಕ್ಕೆ ಅಪಾರ ನೋವನ್ನುಂಟುಮಾಡಿದೆ. ಯಾವಾಗಲೂ ಎಲ್ಲರಿಗೂ ಒಳ್ಳೆಯದನ್ನು ಬಯಸಿ, ಯಾವುದೇ ಶಾರ್ಟ್‌ಕಟ್‌ಗಳು ಇಲ್ಲದೆ ಸಮರ್ಪಣೆ ಮತ್ತು ಕಠಿಣ ಪರಿಶ್ರಮದ ಮೂಲಕ ಯಶಸ್ಸು ಪಡೆಯಬೇಕೆಂಬ ನನ್ನ ಕುಟುಂಬದ ಮೌಲ್ಯಗಳು ನನಗೆ ಸಾಕಷ್ಟು ಕಲಿಸಿವೆ. ದೈವಿಕ ಆಶೀರ್ವಾದಗಳೊಂದಿಗೆ ಈ ಮೌಲ್ಯಗಳಿಗೆ ನಾನು ಬದ್ಧನಾಗಿರುತ್ತೇನೆ. ಸಹಾನುಭೂತಿ ಇಲ್ಲದೆ, ನಾನು ನಿಮ್ಮ ಪ್ರೀತಿ ಮತ್ತು ಬೆಂಬಲವನ್ನು ಪಡೆಯಲು ಶಾಶ್ವತವಾಗಿ ಶ್ರಮಿಸುತ್ತೇನೆ,” ಎಂದು ಯುಜ್ವೇಂದ್ರ ಚಹಲ್ ಹೇಳಿದ್ದಾರೆ.
ಸೋಶಿಯಲ್ ಮೀಡಿಯಾ ಪೋಸ್ಟ್‌ಗಳನ್ನು ಟೀಕಿಸಿದ್ದ ಧನಶ್ರೀ ವರ್ಮಾ
“ಕಳೆದ ಕೆಲವು ದಿನಗಳು ನನ್ನ ಮತ್ತು ನನ್ನ ಕುಟುಂಬಕ್ಕೆ ನಂಬಲಾಗದಷ್ಟು ಕಠಿಣವಾಗಿವೆ. ನಿರಾಧಾರ ಬರವಣಿಗೆ, ಸತ್ಯವನ್ನು ಪರಿಶೀಲಿಸದಿರುವುದು ಮತ್ತು ದ್ವೇಷವನ್ನು ಹರಡುವ ಮುಖರಹಿತ ಟ್ರೋಲ್‌ಗಳಿಂದ ನನ್ನ ಖ್ಯಾತಿಯ ಪಾತ್ರ ಹತ್ಯೆಯಾಗಿದೆ,” ಎಂದು ಧನಶ್ರೀ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಸ್ಟೋರಿಯಲ್ಲಿ ಬರೆದಿದ್ದಾರೆ.