2013ರ ಕುಂಭಮೇಳದ ಘಟನೆ ಬಿಚ್ಚಿಟ್ಟ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್
ಕೊಳಕು, ತ್ಯಾಜ್ಯ ನೋಡಿ ಗಂಗಾಸ್ನಾನ ಮಾಡದೇ ವಾಪಸಾಗಿದ್ದ ವಿದೇಶಿ ನಾಯಕ
ಹಿಂದಿನ ಸಮಾಜವಾದಿ ಪಕ್ಷದ ಅವಧಿಯಲ್ಲಿನ ಅವ್ಯವಸ್ಥೆ ಬಗ್ಗೆ ಯೋಗಿ ಕಿಡಿ
ಲಕ್ನೋ: ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಮಹಾಕುಂಭಮೇಳಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಆಡಳಿತಾರೂಢ ಬಿಜೆಪಿ ಸರ್ಕಾರ ಮತ್ತು ಪ್ರತಿಪಕ್ಷ ಸಮಾಜವಾದಿ ಪಕ್ಷದ ನಡುವೆ ವಾಗ್ಯುದ್ಧವೂ ಆರಂಭವಾಗಿದೆ. ಹಿಂದಿನ ಎಸ್ಪಿ ನೇತೃತ್ವದ ಸರ್ಕಾರದ ಆಡಳಿತದ ವಿರುದ್ಧ ಹರಿಹಾಯ್ದಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, “2013ರಲ್ಲಿ ಕುಂಭಮೇಳಕ್ಕೆ ಆಗಮಿಸಿದ್ದ ಮಾರಿಷಿಯಸ್ ಪ್ರಧಾನಮಂತ್ರಿಗಳು ಗಂಗೆಯ ತಟದಲ್ಲಿನ ಕೊಳಕು, ತ್ಯಾಜ್ಯಗಳು, ಅವ್ಯವಸ್ಥೆಯನ್ನು ನೋಡಿ ಪವಿತ್ರ ಗಂಗೆಯನ್ನು ಪುಣ್ಯಸ್ನಾನ ಮಾಡದೇ ಹಿಂತಿರುಗಿದ್ದರು” ಎಂದು ಹೇಳಿದ್ದಾರೆ. ಈ ಮೂಲಕ ಈ ಹಿಂದೆ ಗಂಗಾ ತೀರದ ಸ್ಥಿತಿ ಹೇಳತೀರದಾಗಿತ್ತು ಎಂದು ಸಮಾಜವಾದಿ ಪಕ್ಷದ ಕಾಲೆಳೆದಿದ್ದಾರೆ. 2013ರಲ್ಲಿ ಉತ್ತರಪ್ರದೇಶದಲ್ಲಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಅಧಿಕಾರದಲ್ಲಿತ್ತು.
ಖಾಸಗಿ ಸುದ್ದಿವಾಹಿನಿಯೊಂದರ ಧರ್ಮ ಸಂಸದ್ ಕಾರ್ಯಕ್ರಮದಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, “ಡಬಲ್ ಎಂಜಿನ್ ಸರ್ಕಾರದ ಪರಿಶ್ರಮದಿಂದಾಗಿ ಗಂಗೆಯು ಈಗ ಸ್ವಚ್ಛವಾಗಿದ್ದಾಳೆ. 2013ರಲ್ಲಿ ಗಂಗೆಯಲ್ಲಿ ಪುಣ್ಯಸ್ನಾನ ಮಾಡದೇ ವಾಪಸಾಗಿದ್ದ ಮಾರಿಷಿಯಸ್ ಪ್ರಧಾನಮಂತ್ರಿಗಳು 2019ರಲ್ಲಿ ಕುಟುಂಬ ಸಮೇತರಾಗಿ ವಾರಾಣಾಸಿಗೆ ಭೇಟಿ ನೀಡಿ, ಕುಂಭಮೇಳ ನಡೆಯುತ್ತಿದ್ದ ಪ್ರಯಾಗ್ ರಾಜ್ ಗೂ ಆಗಮಿಸಿದ್ದರು. ಕುಟುಂಬದ ಜೊತೆಗೆ ಗಂಗೆಯಲ್ಲಿ ಮಿಂದೆದಿದ್ದರು. ಕೇವಲ 6 ವರ್ಷಗಳ ಅವಧಿಯಲ್ಲಿ ಆಗಿದ್ದ ಬದಲಾವಣೆಯನ್ನು ನೋಡಿ ಬೆರಗಾಗಿದ್ದರು” ಎಂದೂ ಹೇಳಿದ್ದಾರೆ.
2 ಲಕ್ಷ ಕೋಟಿ ಆದಾಯ ನಿರೀಕ್ಷೆ:
ಇದೇ ಸಂದರ್ಭದಲ್ಲಿ ಮಹಾಕುಂಭಮೇಳಕ್ಕೆ ಸರ್ಕಾರವು 5,000 ಕೋಟಿ ರೂ. ವೆಚ್ಚ ಮಾಡುತ್ತಿರುವುದನ್ನೂ ಯೋಗಿ ಆದಿತ್ಯನಾಥ್ ಸಮರ್ಥಿಸಿಕೊಂಡಿದ್ದಾರೆ. ಕೆಲವರು ಮಹಾಕುಂಭಮೇಳಕ್ಕೆ ಸರ್ಕಾರ ಮಾಡುತ್ತಿರುವ ವೆಚ್ಚದ ಬಗ್ಗೆ ಆಕ್ಷೇಪವೆತ್ತುತ್ತಿದ್ದಾರೆ. ಆದರೆ, ಒಬ್ಬ ಭಕ್ತ ವಾರಾಣಾಸಿಗೆ ಭೇಟಿ ನೀಡುವುದಿದ್ದರೆ, ಆತ ಇಲ್ಲಿನ ಸಾರಿಗೆ ಬಳಸುತ್ತಾನೆ, ರೆಸ್ಟಾರೆಂಟ್ ನಲ್ಲಿ ಆಹಾರ ಸೇವಿಸುತ್ತಾನೆ, ಹೋಟೆಲ್ ನಲ್ಲಿ ತಂಗುತ್ತಾನೆ, ಮಳಿಗೆಗಳಲ್ಲಿ ಖರೀದಿ ಮಾಡುತ್ತಾನೆ. ಮಹಾಕುಂಭಮೇಳಕ್ಕೆ 40 ಕೋಟಿ ಜನರು ಭೇಟಿ ನೀಡುವ ನಿರೀಕ್ಷೆಯಿದ್ದು, ಪ್ರಸಕ್ತ ಕುಂಭಮೇಳದಿಂದ ಬರೋಬ್ಬರಿ 2 ಲಕ್ಷ ಕೋಟಿ ರೂ. ಆದಾಯದ ನಿರೀಕ್ಷೆಯಿದೆ ಎಂದೂ ಯೋಗಿ ಹೇಳಿದ್ದಾರೆ.
ಜನವರಿ 13ರಿಂದ ಪ್ರಯಾಗ್ ರಾಜ್ ನಲ್ಲಿ ಮಹಾ ಕುಂಭಮೇಳ ಆರಂಭವಾಗಲಿದ್ದು, ದೇಶ-ವಿದೇಶಗಳ ಕೋಟ್ಯಂತರ ಭಕ್ತರು, ವಿಐಪಿಗಳು, ವಿವಿಐಪಿಗಳು, ಸಾಧು-ಸಂತರು ಈ ಬೃಹತ್ ಧಾರ್ಮಿಕ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. 12 ವರ್ಷಗಳಿಗೊಮ್ಮೆ ನಡೆಯಲಿರುವ ಮಹಾ ಕುಂಭಮೇಳವು ಜಗದ್ವಿಖ್ಯಾತಿ ಪಡೆದಿದ್ದು, ಪ್ರಸಕ್ತ ವರ್ಷ 14 ಕೋಟಿಗೂ ಅಧಿಕ ಮಂದಿ ಇದನ್ನು ಕಣ್ತುಂಬಿಕೊಳ್ಳುವ ನಿರೀಕ್ಷೆಯಿದೆ.