ಅಮೆರಿಕದ ಲಾಸ್ ಏಂಜಲೀಸ್(Los Angeles)ನಲ್ಲಿ ಭಾರೀ ಪ್ರಮಾಣದ ಕಾಡ್ಗಿಚ್ಚು(Wildfire) ಹಬ್ಬುತ್ತಿದ್ದು, ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಈಗಾಗಲೇ ಕಾಡ್ಗಿಚ್ಚಿಗೆ 5 ಮಂದಿ ಬಲಿಯಾಗಿದ್ದಾರೆ. 70 ಸಾವಿರಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ ಹಾಲಿವುಡ್(Hollywood)ನ ಪ್ರಮುಖ ತಾರೆಯರು, ಗಾಯಕರು ಸೇರಿದಂತೆ ಹಲವು ಸೆಲೆಬ್ರಿಟಿಗಳಿಗೂ ಇದರ ಬಿಸಿ ತಟ್ಟಿದೆ. ಪ್ಯಾಲಿಸೇಡ್ಸ್(Palisades), ಈಟನ್(Eaton) ಮತ್ತು ಹರ್ಸ್ಟ್(Hurst) ಪ್ರದೇಶಗಳಲ್ಲಿ ಗಾಳಿಯ ವೇಗ ಅಧಿಕವಾಗಿರುವುದರಿಂದ ಕಾಡ್ಗಿಚ್ಚನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ಯಾಲಿಫೋರ್ನಿಯಾ(California) ಆಡಳಿತವು ಈ ಪ್ರಾಂತ್ಯದಲ್ಲಿ “ಕಾಡ್ಗಿಚ್ಚು ತುರ್ತು ಪರಿಸ್ಥಿತಿ” ಘೋಷಿಸಿದೆ.
ಕ್ಯಾಲಿಫೋರ್ನಿಯಾದ ಇತಿಹಾಸದಲ್ಲೇ ಅತಿದೊಡ್ಡ ಕಾಡ್ಗಿಚ್ಚು ಇದಾಗಿದೆ. ನೀರಿನ ಅಭಾವ ಮತ್ತು ಅಗ್ನಿಶಾಮಕ (fire extinguisher) ಸಿಬ್ಬಂದಿಯ ಕೊರತೆಯು ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಎಲ್ಲ ರೀತಿಯ ಪ್ರಯತ್ನಗಳನ್ನೂ ನಡೆಸಲಾಗುತ್ತಿದ್ದು, ಅಗ್ನಿಶಾಮಕ ದಳದಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದಂಥ ಹಲವರನ್ನು ಸಂಪರ್ಕಿಸಿ, ನೆರವು ಕೋರಲಾಗುತ್ತಿದೆ. ಅಮೆರಿಕದ ಎರಡನೇ ಅತಿದೊಡ್ಡ ನಗರವಾಗಿರುವ ಕ್ಯಾಲಿಫೋರ್ನಿಯಾದಲ್ಲಿ ಅರಣ್ಯವು(Forest) ಬೆಂಕಿಯುಗುಳುತ್ತಿರುವ ಪರಿಣಾಮ, ಸಾವಿರಕ್ಕೂ ಅಧಿಕ ಕಟ್ಟಡಗಳು ಅಗ್ನಿಗಾಹುತಿಯಾಗಿವೆ. ಸಾವಿರಾರು ಜನರು ಮನೆಗಳನ್ನು ತೊರೆದು ಸುರಕ್ಷಿತ ಪ್ರದೇಶಗಳಿಗೆ ಪಲಾಯನಗೈದಿದ್ದಾರೆ. ಆಗಸ ಪೂರ್ತಿ ಕಡುಕಪ್ಪು ಹೊಗೆಯ ಹೊದಿಕೆ ಆವರಿಸಿದೆ.
ಹಾಲಿವುಡ್ ತಾರೆಯರು ಸಂಕಷ್ಟದಲ್ಲಿ:
ಲಾಸ್ ಏಂಜಲೀಸ್ ನ ಪೆಸಿಫಿಕ್ ಪ್ಯಾಲಿಸೇಡ್ಸ್ (Pacific Palisades) ಪ್ರದೇಶವು ಐಷಾರಾಮಿ ಬಂಗಲೆಗಳಿಂದ ಕೂಡಿದ್ದು, ಇದೇ ಪ್ರದೇಶದಲ್ಲಿ ಹಾಲಿವುಡ್ ನ ಹೆಚ್ಚಿನ ನಟರು, ಸಂಗೀತಗಾರರು, ಕಲಾವಿದರು ಸೇರಿದಂತೆ ಸೆಲೆಬ್ರಿಟಿಗಳು(Celebrities) ನೆಲೆಸಿದ್ದಾರೆ. ಗಾಳಿಯ ರಭಸಕ್ಕೆ ಬೆಂಕಿಯು ಅತಿ ವೇಗದಲ್ಲಿ ಮನೆಯಿಂದ ಮನೆಗೆ ವ್ಯಾಪಿಸುತ್ತಿದೆ. ಈ ಪ್ರದೇಶವೊಂದರಲ್ಲೇ ಸುಮಾರು 16,000 ಎಕರೆ ಪ್ರದೇಶ ಅಗ್ನಿಗಾಹುತಿಯಾಗಿದೆ.
ಸಾವಿರಕ್ಕೂ ಹೆಚ್ಚು ಮನೆಗಳು, ಹೊರಗೆ ನಿಲ್ಲಿಸಲಾಗಿದ್ದ ಐಷಾರಾಮಿ ವಾಹನಗಳು ಸುಟ್ಟು ಕರಕಲಾಗಿವೆ. ಈ ಪ್ರದೇಶದಲ್ಲಿ ಆಯೋಜಿಸಲಾಗಿದ್ದ ಎಲ್ಲಕಾರ್ಯಕ್ರಮಗಳನ್ನೂ ರದ್ದು ಮಾಡಲಾಗಿದೆ. ಅನೇಕರು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಅಳಲು ತೋಡಿಕೊಂಡಿದ್ದಾರೆ.
ನಾನು ನನ್ನ ಮಕ್ಕಳು ಮತ್ತು ಸಾಕು ಪ್ರಾಣಿಗಳೊಂದಿಗೆ ಮನೆ ತೊರೆಯಬೇಕಾಯಿತು ಎಂದು ಗಾಯಕಿ ಮ್ಯಾಂಡಿ ಮೂರ್ ಅವರು ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಎಮ್ಮಿ ಪ್ರಶಸ್ತಿ ಪುರಸ್ಕೃತ ನಟ ಜೇಮ್ಸ್ ವುಡ್ಸ್ ಅವರು ತಮ್ಮ ಮನೆಯು ಬೆಂಕಿಗಾಹುತಿಯಾಗುತ್ತಿರುವ ವಿಡಿಯೋವನ್ನು ಟ್ವೀಟರ್ ನಲ್ಲಿ (Twitter)ಪೋಸ್ಟ್ ಮಾಡಿದ್ದಾರೆ. ಆಸ್ಕರ್ ವಿಜೇತ ನಟ ಜೇಮಿ ಲೀ ಕರ್ಟಿಸ್ (Jamie Lee Curtis) ಅವರೂ ಕಾಡ್ಗಿಚ್ಚಿನ ತೀವ್ರತೆಯನ್ನು ಬಿಚ್ಚಿಟ್ಟಿದ್ದಾರೆ.
ಅಧ್ಯಕ್ಷ ಬೈಡೆನ್ ಭೇಟಿಘಟನೆ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ (Joe Biden) ಅವರು ಲಾಸ್ ಏಂಜಲೀಸ್ ಗೆ ಭೇಟಿ ನೀಡಿದ್ದು, ಕ್ಯಾಲಿಫೋರ್ನಿಯಾ ಗವರ್ನರ್ ಗೇವಿನ್ ನ್ಯೂಸಮ್ (Gavin Newsom) ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವಂತೆ ಸೂಚನೆ ನೀಡಿದ್ದಾರೆ.