ರಾಕಿಂಗ್ ಸ್ಟಾರ್ ಯಶ್ ಅವರ ಜನ್ಮದಿನವಿಂದು. ಹೀಗಾಗಿ ‘ಟಾಕ್ಸಿಕ್’ ಗ್ಲಿಂಪ್ಸ್ ರಿಲೀಸ್ ಆಗಿದೆ. ಯಶ್ ಅವರ ಚಿತ್ರದ ಮೇಲಿರುವ ನಿರೀಕ್ಷೆ ಈಗ ದ್ವಿಗುಣವಾಗಿದೆ.
‘ಟಾಕ್ಸಿಕ್’ ಚಿತ್ರಕ್ಕೆ ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಮೂಲಕ ವೆಂಕಟ್ ನಾರಾಯಣ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಮುಂಬೈ, ಗೋವಾದಲ್ಲಿ ಚಿತ್ರೀಕರಣ ನಡೆಯುತ್ತಿದೆ. ಟಾಕ್ಸಿಕ್ ದೇಶದಲ್ಲಿ ಡ್ರಗ್ಸ್ ಜಾಲ ಮತ್ತು ಡ್ರಗ್ಸ್ ಸಮಸ್ಯೆ ಕುರಿತು ಕಥೆ ಹೊಂದಿರುವ ಮಾಸ್ ಚಿತ್ರ ಎನ್ನುತ್ತಿದೆ ಚಿತ್ರತಂಡದ ಮೂಲಗಳು. ಗೋವಾದ ಡ್ರಗ್ಸ್ ಮಾಫಿಯಾವೇ ಕಥೆಯ ಕೇಂದ್ರಬಿಂದು. ಸಮುದ್ರ ತೀರದಲ್ಲಿ ಹೇಗೆ ಡ್ರಗ್ಸ್ ಜಾಲ ವ್ಯಾಪಿಸಿಕೊಂಡಿದೆ ಎಂಬುದನ್ನು ಕಥೆಯಲ್ಲಿ ಹೇಳುತ್ತಿದ್ದಾರಂತೆ ಗೀತರು ಮೋಹನ್‌ದಾಸ್.
ಈ ಚಿತ್ರದಲ್ಲಿ ಹಿಂದಿಯ ಕಿಯಾರಾ ಅಡ್ವಾಣಿ, ತಮಿಳಿನ ನಯನತಾರಾ ನಟಿಸುತ್ತಿದ್ದಾರೆ. ಈ ಸಿನಿಮಾ ವರ್ಷಾಂತ್ಯಕ್ಕೆ ರಿಲೀಸ್ ಆಗಲಿದೆ. ಈ ಚಿತ್ರದಲ್ಲಿ ಹಾಲಿವುಡ್ ತಂತ್ರಜ್ಞರು ಕೂಡ ಕೆಲಸ ಮಾಡುತ್ತಿದ್ದಾರೆ.
ಯಶ್ ಅವರು ರೆಟ್ರೋ ಕಾರಲ್ಲಿ ಸ್ಟೈಲಿಶ್ ಆಗಿ ಕ್ಲಬ್ ಒಂದಕ್ಕೆ ಎಂಟ್ರಿ ಕೊಡುತ್ತಾರೆ. ಅವರು ಒಳಗೆ ಬರುತ್ತಿರುವಾಗ ಅಲ್ಲಿ ಎಲ್ಲರೂ ಮೋಜಿನಲ್ಲಿ ತೇಲುತ್ತಾ ಇರುತ್ತಾರೆ. ಆಗ ಯಶ್ ಅವರು ಹೆಂಡದ ಬಾಟಲಿ ತೆಗೆದುಕೊಂಡು ಅಲ್ಲಿದ್ದ ಮಹಿಳೆಯ ಮೇಲೆ ಸುರಿಯುತ್ತಾರೆ. ಮೇಕಿಂಗ್ ನೋಡಿದರೆ ಇದು ರೆಟ್ರೋ ಕಥೆಯ ರೀತಿ ಕಾಣುತ್ತದೆ.
ಇನ್ನೂ ಸಾರ್ವಜನಿಕ ಬರ್ತಡೆ ಆಚರಣೆಯಿಂದ ದೂರ ಉಳಿದಿರುವ ಯಶ್ ಹುಟ್ಟುಹಬ್ಬವನ್ನು ಆಪ್ತರೊಂದಿಗೆ ಸರಳವಾಗಿ ಆಚರಿಸಿಕೊಂಡಿದ್ದಾರೆ.