ಬಿಬಿಎಂಪಿ ಮುಖ್ಯ ಇಂಜಿನಿಯರ್ ಕಚೇರಿ ಮೇಲೆ ಇಡಿ ಮಂಗಳವಾರ ದಾಳಿ ನಡೆಸಿತ್ತು. ಈ ವೇಳೆ ಹಲವು ಕರ್ಮಕಾಂಡಗಳು ಬೆಳಕಿಗೆ ಬಂದಿವೆ ಎನ್ನಲಾಗಿದೆ.
ಅಗೆದಷ್ಟು ಬಿಬಿಎಂಪಿ ಇಂಜಿನಿಯರ್ ಗಳ ಕರ್ಮಕಾಂಡ ಬಯಲಾಗುತ್ತಿದೆ. ಕೇವಲ ಬೋರ್ ವೆಲ್ ಅಲ್ಲ. ವೈಟ್ ಟಾಪಿಂಗ್, ಜಾಹೀರಾತು, ಸ್ಟಾರ್ಮ್ ವಾಟರ್ ಡ್ರೈನ್, ರಸ್ತೆ ಗುಂಡಿ ಮುಚ್ಚುವಿಕೆ ಬಗ್ಗೆಯೂ ಇಡಿ ಅಧಿಕಾರಿಗಳು ದಾಖಲೆಗಳನ್ನು ಕೇಳಿದ್ದಾರೆ.
2014 ರಿಂದ 2024ರ ವರೆಗಿನ ಹತ್ತು ವರ್ಷದ ಅವಧಿಯಲ್ಲಿ ನಡೆದ ಪ್ರಮುಖ ಕಾಮಗಾರಿ, ಯೋಜನೆಗಳ ಬಗೆಗಿನ ಮಾಹಿತಿಯನ್ನು ಇಡಿ ಅಧಿಕಾರಿಗಳು ಕೇಳಿ ಪರಿಶೀಲನೆ ನಡೆಸುತ್ತಿದ್ದಾರೆ. ತಡರಾತ್ರಿಯವರೆಗೂ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಅಲ್ಲದೇ, ಸಂಬಂಧಪಟ್ಟ ದಾಖಲೆಗಳ ಪರಿಶೀಲನೆಗಾಗಿ ಇಡಿ ಅಧಿಕಾರಿಗಳು ಮೂರು ದಿನಗಳ ಕಾಲ ಪಾಲಿಕೆಯಲ್ಲೇ ಉಳಿಯಲಿದ್ದಾರೆ. ಹೀಗಾಗಿ ಪಾಲಿಕೆಯ ವಾರ್ ರೂಮ್ ನಲ್ಲಿ ಇಡಿ ಅಧಿಕಾರಿಗಳಿಗೆ ದಾಖಲೆ ಪರಿಶೀಲನೆಗೆ ವ್ಯವಸ್ಥೆ ಮಾಡಿಕೊಡಲಾಗಿದೆ. ಇಂದು ಕೂಡ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಲಿದ್ದಾರೆ.
ಪ್ರಮುಖವಾಗಿ ವೈಟ್ ಟ್ಯಾಪಿಂಗ್, ಜಾಹೀರಾತು, ಬೃಹತ್ ರಾಜಕಾಲುವೆ, ರಸ್ತೆ ಗುಂಡಿ ಮುಚ್ಚುವ ದಾಖಲೆಗಳ ಪರಿಶೀಲನೆ ನಡೆಸಲಿದ್ದಾರೆ. ಮಂಗಳವಾರ ಕೂಡ ಕೆಲವು ದಾಖಲೆಗಳ ಪರಿಶೀಲನೆ ಸಂದರ್ಭದಲ್ಲೇ ಲೋಪ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆಯ ಹಣಕಾಸು ವಿಭಾಗದ ಬ್ಯಾಂಕ್ ಬ್ಯಾಲೆನ್ಸ್ ಶೀಟ್ ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಗಳನ್ನು ಕೂಡ ವಿಚಾರಣೆಗೆ ಒಳಪಡಿಸಿದ್ದಾರೆ.
ಕೆಲ ಕಾಮಗಾರಿಗಳು ಪೂರ್ಣ ಗೊಳ್ಳದೆ ಬಿಲ್ ಪಾವತಿ ಅಗಿರುವ ವಿಷಯ ಬೆಳಕಿಗೆ ಬಂದಿದ್ದು, ಈ ಕುರಿತು ಮಾಹಿತಿ ಕಲೆ ಹಾಕಿದ್ದಾರೆ. ಅರ್ ಅರ್ ನಗರದ ಹಲವು ಕಾಮಗಾರಿ ಬಿಲ್ ಗಳ ಪರಿಶೀಲನೆ ನಡೆಸಿದ್ದಾರೆ. ಡಾಂಬರೀಕಾರಣ ಮಾಡದೆ ಬಿಲ್ ಪಾವತಿ ಅದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಪಾಲಿಕೆಯ 8 ವಲಯಗಳ ಕಾಮಗಾರಿಗಳ ಬಿಲ್ ಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.