ಕಾಂಗ್ರೆಸ್ ನಲ್ಲಿ ಡಿನ್ನರ್ ಪಾಲಿಟಿಕ್ಸ್ ದೊಡ್ಡ ಚರ್ಚೆಗೆ ಕಾರಣವಾಗುತ್ತಿದೆ. ಹಲವರು ಡಿನ್ನರ್ ಪಾರ್ಟಿ ಸ್ನೇಹಪೂರ್ವಕವಾಗಿ ನಡೆದ ಸತ್ಕಾರ ಎಂದರೆ, ಹಲವರು ತಂತ್ರಗಾರಿಕೆಯ ಭಾಗವಾಗಿ ನಡೆಯುತ್ತಿರುವ ಸಭೆ ಎಂದು ವ್ಯಾಖ್ಯಾನಿಸುತ್ತಿದ್ದಾರೆ. ಹೀಗಾಗಿ ಡಿನ್ನರ್ ಪಾರ್ಟಿ ಹಲವು ನಾಯಕರಿಗೆ ಇರಿಸು ಮುರಿಸು ತರುತ್ತಿದೆ ಎನ್ನಲಾಗುತ್ತಿದೆ. ಹೀಗಾಗಿ ಈಗ ಕಾಂಗ್ರೆಸ್ ನ ಡಿನ್ನರ್ ಪಾರ್ಟಿಯ ಸುದ್ದಿ ಹೈಕಮಾಂಡ್ ಅಂಗಳಕ್ಕೂ ತಲುಪಿದೆ ಎನ್ನಲಾಗಿದೆ.
ಇತ್ತೀಚೆಗಷ್ಟೇ ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಹಲವು ನಾಯಕರು ಡಿನ್ನರ್ ಪಾರ್ಟಿ ನೆಪದಲ್ಲಿ ಸಭೆ ಸೇರಿದ್ದರು. ಡಿಸಿಎಂ ಡಿ.ಕೆ. ಶಿವಕುಮಾರ್ ವಿದೇಶಕ್ಕೆ ಹಾರಿದ ಸಂದರ್ಭದಲ್ಲೇ ಈ ಸಭೆ ನಡೆದಿದ್ದಕ್ಕೆ ಹಲವು ಚರ್ಚೆಗಳು ಶುರುವಾಗಿದ್ದವು. ಇದರ ಬೆನ್ನಲ್ಲೇ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಎಸ್ಸಿ, ಎಸ್ಟಿ ನಾಯಕರ ಔತಣಕೂಟ ಏರ್ಪಡಿಸಿದ್ದರು. ಈಗ ಡಿಕೆಶಿ ಇಂತಹ ಪಾರ್ಟಿಗಳಿಗೆ ಬ್ರೇಕ್ ಹಾಕಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ನಿಟ್ಟಿನಲ್ಲೇ ಇಂದು ರಾತ್ರಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಕರೆದಿದ್ದ ದಲಿತ ಸಚಿವರು, ಶಾಸಕರು, ಸಂಸದರು, ಮುಖಂಡರಿಗೆ ಕರೆದಿದ್ದ ಔತಣಕೂಟವನ್ನು ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ. ಈ ಕುರಿತು ಖುದ್ದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. ಈಗ ಈ ಡಿನ್ನರ್ ಮೀಟಿಂಗ್ ನಡೆಯದಂತೆ ಡಿಸಿಎಂ ಡಿ.ಕೆ. ಶಿವಕುಮಾರ್ ನೋಡಿಕೊಂಡರಾ? ಎಂಬ ಚರ್ಚೆ ಶುರುವಾಗಿದೆ.
ವಿದೇಶದಿಂದ ನೇರವಾಗಿ ದೆಹಲಿಗೆ ಪ್ರಯಾಣ ಬೆಳೆಸಿದ್ದ ಡಿಕೆಶಿ, ದೆಹಲಿಯಲ್ಲೇ ಬೀಡುಬಿಟ್ಟು ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಪರಮೇಶ್ವರ್ ಕರೆದಿದ್ದ ಔತಣಕೂಟಕ್ಕೆ ಬ್ರೇಕ್ ಹಾಕುವಂತೆ ಪಟ್ಟು ಹಿಡಿದಿದ್ದರು ಎನ್ನಲಾಗಿದೆ. ಹೀಗಾಗಿ ಔತಣಕೂಟ ರದ್ದಾಗಿದೆ ಎಂದು ತಿಳಿದು ಬಂದಿದೆ.