ಧಾರವಾಡ: ಸಂವಿಧಾನ ಶಿಲ್ಪಿಗೆ ಅತಿ ಹೆಚ್ಚು ಅವಮಾನ ಮಾಡಿದವರೇ ಕಾಂಗ್ರೆಸ್ ನವರು ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ್ ಹುಬ್ಬಳ್ಳಿಯಲ್ಲಿ ಆರೋಪಿಸಿದ್ದಾರೆ.
ಈ ಮೂಲಕ ದಲಿತ ಸಂಘಟನೆಗಳು ಜ. 9ರಂದು ಹುಬ್ಬಳ್ಳಿ-ಧಾರವಾಡ ಬಂದ್ ಗೆ ಕರೆ ನೀಡಿದ್ದಕ್ಕೆ ಕಿಡಿಕಾರಿದ್ದಾರೆ. ಕಾಂಗ್ರೆಸ್ ಪಕ್ಷವು ಎರಡು ಬಾರಿ ಅಂಬೇಡ್ಕರ್ ರನ್ನು ಸೋಲಿಸಿದೆ. ಕಾಂಗ್ರೆಸ್ ನವರ ಕಾಟಕ್ಕೆ ಅಂಬೇಡ್ಕರ್ ಬೇಸತ್ತಿದ್ದರು. ಅಂಬೇಡ್ಕರ್ ನಿಧನರಾಗಿದ್ದಾಗ ಅಂತ್ಯಕ್ರಿಯೆಗೂ ಕಾಂಗ್ರೆಸ್ ಜಾಗ ಕೊಡಲಿಲ್ಲ. ಅವರು ಬದುಕಿದ್ದಾಗ ಹಾಗೂ ನಿಧನರಾದಾಗಲೂ ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ನಿಂದ ಸಾಕಷ್ಟು ಅವಮಾನಗಳಾಗಿದ್ದವು. ಈಗಲೂ ಕಾಂಗ್ರೆಸ್ ಪಕ್ಷ ಮುಗ್ಧ ದಲಿತರನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
ಅಂಬೇಡ್ಕರ್ ಹೆಸರಿನ ಮೂಲಕ ದಲಿತರ ಮತ ಪಡೆಯುವ ತಂತ್ರ ಮಾಡಿದ್ದಾರೆ. ಮತ ಬ್ಯಾಂಕ್ ರಾಜಕೀಯ ಮಾಡುವ ಕೆಲಸವನ್ನು ಕಾಂಗ್ರೆಸ್ ನವರು ಮಾಡುತ್ತಿದ್ದಾರೆ. ಈಗ ಅವಳಿ ನಗರ ಬಂದ್ ಮಾಡುವ ಮೂಲಕ ಜನಸಾಮಾನ್ಯರಿಗೆ ಕಾಂಗ್ರೆಸ್ ಸಮಸ್ಯೆ ತಂದೊಡ್ಡುತ್ತಿದೆ. ಬೆಲೆ ಏರಿಕೆಯಿಂದ ಜನಸಾಮಾನ್ಯರು ಸಮಸ್ಯೆ ಅನುಭವಿಸುತ್ತಿದ್ದಾರೆ.
ಅದರ ನಡುವೆಯೂ ಈ ರೀತಿ ಬಂದ್ ಮಾಡುವ ಮೂಲಕ ಜನರಿಗೆ ಸಂಕಷ್ಟ ಎದುರಾಗುವಂತೆ ಮಾಡುತ್ತಿದ್ದಾರೆ. ಹೀಗಾಗಿ ಕೂಡಲೇ ಬಂದ್ ಹಿಂಪಡೆಯಬೇಕು. ಅವಳಿ ನಗರ ಬಂದ್ ಹಿಂಪಡೆಯದಿದ್ದರೆ ಅದಕ್ಕೆ ಪ್ರತಿಯಾಗಿ ಬಿಜೆಪಿಯಿಂದ ಬಂದ್ ಕರೆ ನೀಡಬೇಕಾಗುತ್ತದೆ ಎಂದು ಹೇಳಿದ್ದಾರೆ.ಇದರಿಂದಾಗುವ ಸಾರ್ವಜನಿಕ ಸಮಸ್ಯೆಗಳಿಗೆ ಕಾಂಗ್ರೆಸ್ ನವರೇ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಕಾಂಗ್ರೆಸ್ ಬಂದ್ ಕರೆಗೆ ಪ್ರತಿಯಾಗಿ ಬಿಜೆಪಿಯಿಂದ ಬಂದ್ ನಡೆಸುವ ಎಚ್ಚರಿಕೆ ನೀಡಿದ್ದಾರೆ.