ಉತ್ತರ ಪ್ರದೇಶದ ಪ್ರಯಾಗ್ ರಾಜ್ನಲ್ಲಿರುವ ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳ ಸಂಗಮ ಕ್ಷೇತ್ರವಾದ ತ್ರಿವೇಣಿ ಸಂಗಮದಲ್ಲಿ 2025ರ ಜನವರಿ 13ರಿಂದ ಫೆಬ್ರವರಿ 26ರವರೆಗೆ ಮಹಾ ಕುಂಭ ನಡೆಯಲಿದೆ. ಇದಕ್ಕಾಗಿ ಸಕಲ ಸಿದ್ಧತೆಗಳು ನಡೆದಿವೆ. 12 ವರ್ಷಕ್ಕೊಮ್ಮೆ ನಡೆಯುವ ಮಹಾ ಕುಂಭಮೇಳವು ಕೋಟ್ಯಂತರ ಹಿಂದುಗಳಿಗೆ ಪವಿತ್ರವಾಗಿದೆ. ಹಾಗಾದರೆ, ಮಹಾಕುಂಭದ ವೈಶಿಷ್ಟ್ಯಗಳೇನು? ಇದು ಏಕೆ ಪವಿತ್ರ ಎಂಬ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ.
700 ವರ್ಷಗಳ ಇತಿಹಾಸ ಇರುವ ಈ ಕುಂಭ ಮೇಳವನ್ನು ವರ್ಷಗಳಿಗೆ ಅನುಗುಣವಾಗಿ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಸಾಮಾನ್ಯವಾಗಿ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿರುವ ಸರಸ್ವತಿ, ಗಂಗಾ ಹಾಗೂ ಯಮುನಾ ನದಿಗಳ ಸಂಗಮ ಕ್ಷೇತ್ರವಾದ ತ್ರಿವೇಣಿ ಸಂಗಮದಲ್ಲಿ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಕುಂಭಮೇಳವನ್ನು ನಡೆಸಲಾಗುತ್ತದೆ. ಇನ್ನು ಆರು ವರ್ಷಗಳಿಗೊಮ್ಮೆ ಅರ್ಧ ಕುಂಭ ಮೇಳ ನಡೆಸಲಾಗುತ್ತದೆ. ಹಾಗೂ ಸಂಪೂರ್ಣ ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಕುಂಭ ಮೇಳವನ್ನು ಮಹಾ ಕುಂಭ ಮೇಳ ಎಂದು ಕರೆಯಲಾಗುತ್ತದೆ.
ಮಹಾಕುಂಭವು ಮಾನವ ಜನಾಂಗಕ್ಕೆ ಪಾಪ, ಪುಣ್ಯ ಮತ್ತು ಕತ್ತಲೆ ಮತ್ತು ಬೆಳಕಿನ ಅರಿವನ್ನು ಮೂಡಿಸುತ್ತದೆ. ಅದಕ್ಕಾಗಿಯೇ ಪ್ರಪಂಚದಾದ್ಯಂತದ ಕೋಟ್ಯಂತರ ಭಕ್ತರು ಮಹಾಕುಂಭದಲ್ಲಿ ನಂಬಿಕೆಯಿಂದ ಮುಳುಗಲು ಆಗಮಿಸುತ್ತಾರೆ. ಈ ಬಾರಿ ಸುಮಾರು 45 ಕೋಟಿ ಜನ ನದಿಯಲ್ಲಿ ಮಿಂದೇಳುತ್ತಾರೆ ಎಂದು ತಿಳಿದುಬಂದಿದೆ.
12 ದಿನಗಳ ಕಾಲ ಅಮೃತವನ್ನು ಪಡೆಯಲು ದೇವತೆಗಳು ಮತ್ತು ರಾಕ್ಷಸರ ನಡುವೆ ಘೋರ ಯುದ್ಧ ನಡೆಯಿತು.
ದೇವತೆಗಳ 12 ದಿನಗಳು, ಮಾನವನ 12 ವರ್ಷಗಳಿಗೆ ಸಮಾನವಾಗಿರುತ್ತದೆ. ಈ ಕಾರಣಕ್ಕಾಗಿಯೇ ಪ್ರತಿ 12 ವರ್ಷಗಳಿಗೊಮ್ಮೆ ಇಲ್ಲಿ ಕುಂಭ ಮೇಳವನ್ನು ಆಯೋಜಿಸಲಾಗುತ್ತದೆ. ಹಾಗೆಯೇ ಪ್ರಯಾಗರಾಜನನ್ನು ತೀರ್ಥರಾಜ್ ಅಥವಾ ತೀರ್ಥಯಾತ್ರಾ ಸ್ಥಳಗಳ ರಾಜ ಎಂದು ಕರೆಯಲಾಗುತ್ತದೆ. ಇಲ್ಲಿ ಮೊದಲ ಯಾಗವನ್ನು ಬ್ರಹ್ಮ ದೇವರಿಂದ ನಡೆಸಲಾಯಿತು ಎಂಬ ನಂಬಿಕೆ ಇದೆ. ಪೌರಾಣಿಕ ಮತ್ತು ಧಾರ್ಮಿಕ ಕಥೆಗಳ ಪ್ರಕಾರ, ದೇವತೆಗಳು ಮತ್ತು ರಾಕ್ಷಸರು ಒಟ್ಟಾಗಿ ಸಾಗರವನ್ನು ಮಂಥನ ಮಾಡಿದಾಗ, ಅಮೃತ ಕಲಶ ಅದರಿಂದ ಹೊರಬಂದಿತು. ಅಮತ್ರಿ ಕಲಶವನ್ನು ಕುಂಭದ ಸಂಕೇತವೆಂದು ಪರಿಗಣಿಸಲಾಗಿದೆ. ಕುಂಭ ಎಂದರೆ ಕಲಶ (ಕುಂಡ). ಆದರೆ ಇದು ಸಾಮಾನ್ಯ ಕಲಶವಲ್ಲ ಅಮೃತ ಕಲಶ ಮತ್ತು ಈ ಅಮೃತ ಕಲಶ ಕುಂಭೋತ್ಸವದ ಹಿನ್ನೆಲೆಯಾಗಿದೆ.
ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುವ ಮಹಾ ಕುಂಭಮೇಳಕ್ಕೆ 6,500 ಕೋಟಿ ರೂ. ಮೀಸಲಿರಿಸಲಾಗಿದೆ. 45 ದಿನ ರಾಮಲೀಲಾ, ಕೃಷ್ಣ ಲೀಲಾ, ಯಜ್ಞ ಸೇರಿ ಹತ್ತಾರು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಸುಮಾರು 4,600 ಸಂಘಟನೆಗಳು ಪೆಂಡಾಲು ಹಾಕಲು, ಜನರಿಗೆ ಮೂಲ ಸೌಕರ್ಯಗಳನ್ನು ಒದಗಿಸಲು ಮುಂದಾಗಿವೆ. ಸುಸಜ್ಜಿತ ರಸ್ತೆ, ವಿಶೇಷ ರೈಲುಗಳ ವ್ಯವಸ್ಥೆಯನ್ನೂ ಮಾಡಲಾಗಿದೆ. ಕರ್ನಾಟಕದಿಂದಲೂ ರೈಲಿನ ವ್ಯವಸ್ಥೆ ಇದೆ.
ಒಟ್ಟಿನಲ್ಲಿ ಮಹಾ ಕುಂಭ ಮೇಳಕ್ಕಾಗಿ ಕಳೆದ 12 ವರ್ಷಗಳಿಂದ ಭಕ್ತಿಯಿಂದ ಕಾಯುತ್ತಿದ್ದ ಧಾರ್ಮಿಕ ಬಂಧುಗಳಿಗೆ ಭಕ್ತ ಸಾಗರದಲ್ಲಿ ಮಿಂದೇಳಲು ಇದೊಂದು ಸುವರ್ಣಾವಕಾಶವೆಂದೇ ಭಾವಿಸಲಾಗುತ್ತದೆ. ಅಂತೆಯೇ ಮಹಾಕುಂಬ ಮೇಳವು ಯಶಸ್ವಿಯಾಗಿ ನೆರವೇರಿ ಭಕ್ತರ ಮನ ಮುಟ್ಟಲಿ ಎಂಬುವುದು ಕರ್ನಾಟಕ ನ್ಯೂಸ್ ಬೀಟ್ ಆಶಯ