ಕರ್ನಾಟಕದ ನಂದಿನಿ ಹಾಲಿನ ಉತ್ಪನ್ನಗಳು ಈಗ ಕೇವಲ ಉತ್ಪನ್ನಗಳಾಗಿ ಉಳಿದಿಲ್ಲ. ಗ್ರಾಹಕರಿಗೆ ಗುಣಮಟ್ಟದ ವಿಶೇಷ ಉತ್ಪನ್ನಗಳು ಸಿಗುವ ಮಳಿಗೆಯಾಗಿದೆ. ಹೈನುಗಾರರಿಗೆ ಜೀವನೋಪಾಯದ ಮಾರ್ಗವಾಗಿದೆ. ಅಷ್ಟೇ ಅಲ್ಲ, ಕೆಎಂಎಫ್ ನಂದಿನಿ ಉತ್ಪನ್ನಗಳು ಕನ್ನಡಿಗರ ಅಸ್ಮಿತೆಯೂ ಆಗಿದೆ. ಇಷ್ಟೆಲ್ಲ ಭಾವನೆಗಳನ್ನು ಹೊಂದಿರುವ ನಂದಿನಿ ಬ್ರ್ಯಾಂಡ್ ಉತ್ಪನ್ನಗಳು ಈಗ ಆರು ರಾಜ್ಯಗಳಿಗೆ ಮಾರುಕಟ್ಟೆಯನ್ನು ವಿಸ್ತರಣೆ ಮಾಡಿಕೊಂಡಿದೆ ಎಂಬುವುದು ಹೆಮ್ಮೆಯ ಸಂಗತಿ.
ಕರ್ನಾಟಕದಿಂದ ಹಲವು ರಾಜ್ಯಗಳಿಗೆ ನಿತ್ಯ 4.35 ಲಕ್ಷ ಲೀಟರ್ ಹಾಲು ಪೂರೈಕೆಯಾಗುತ್ತಿದೆ. ದೆಹಲಿಗೆ ಮಂಡ್ಯದಿಂದ ನಂದಿನಿ ಹಾಲು ಸೇರಿ ಹಲವು ಉತ್ಪನ್ನ ಪೂರೈಕೆಯಾಗುತ್ತಿವೆ. ಮುಂಬೈಗೆ ತುಮಕೂರಿನಿಂದ, ಹೈದರಾಬಾದ್ ಗೆ ಹಾಸನದಿಂದ, ಚೆನ್ನೈ ಹಾಗೂ ಕೇರಳಕ್ಕೆ ಮೈಸೂರಿನಿಂದ , ಗೋವಾ ಹಾಗೂ ಪುಣೆಗೆ ಬೆಳಗಾವಿಯಿಂದ, ತಮಿಳುನಾಡು ನೀಲಗಿರಿ ಹಾಗೂ ಕೇರಳಕ್ಕೆ ಚಾಮರಾಜನಗರದಿಂದ, ಸೊಲ್ಲಾಪುರಕ್ಕೆ ಬೆಳಗಾವಿಯಿಂದ, ಮಹಾರಾಷ್ಟ್ರಕ್ಕೆ ವಿಜಯಪುರದಿಂದ ನಂದಿನಿ ಹಾಲು ಸಾಗಾಟ ಮಾಡಲಾಗುತ್ತಿದೆ.
ಕರ್ನಾಟಕದಲ್ಲಿ ಮಾತ್ರವಲ್ಲ, ಆರು ರಾಜ್ಯಗಳಿಗೆ ಹಾಲು ಉತ್ಪನ್ನಗಳನ್ನು ಸರಬರಾಜು ಮಾಡುವ ಮೂಲಕ ಕೆಎಂಎಫ್ ಪ್ರತಿದಿನ 2.47 ಕೋಟಿ ರೂ. ಆದಾಯ ಪಡೆಯುತ್ತಿದೆ. ಹಾಲು ಹಾಗೂ ಮೊಸರಿನಿಂದ ಮಾಸಿಕ ಬೇರೆ ರಾಜ್ಯಗಳಿಂದಲೇ 75 ಕೋಟಿ ರೂ. ಆದಾಯ ಗಳಿಸುತ್ತಿದೆ. ಇದೇ ಕಾರಣಕ್ಕಾಗಿ, ಹೈನೋದ್ಯಮದಲ್ಲಿ ಕೆಎಂಎಫ್ ದೇಶದಲ್ಲೇ 2 ನೇ ಸ್ಥಾನ ಪಡೆದಿದೆ. ದಕ್ಷಿಣ ಭಾರತದಲ್ಲಿ ಹಾಲು ಶೇಖರಣೆ ಹಾಗೂ ಮಾರಾಟದಲ್ಲಿ ಅಗ್ರಸ್ಥಾನದಲ್ಲಿದೆ ಎಂಬುವುದು ಗಣನೀಯ. ಅಷ್ಟೇ ಅಲ್ಲ ಕನ್ನಡಿಗರ ಹೆಮ್ಮೆ, ಕರ್ನಾಟಕದ ಅಸ್ಮಿತೆ ಕೆಎಂಎಫ್ ‘ನಂದಿನಿ ಮಳಿಗೆ’ ದುಬೈಗೂ ಎಂಟ್ರಿ ಕೊಟ್ಟಿದೆ. ಈ ಮೂಲಕ ಕನ್ನಡದ ಕಂಪು ವಿದೇಶದಲ್ಲೂ ಹರಡಿದಂತಾಗಿದೆ.
ರಾಜ್ಯದಲ್ಲಿ ಒಟ್ಟು 15 ಹಾಲು ಉತ್ಪಾದನೆ ಒಕ್ಕೂಟಗಳಿವೆ. ಇವುಗಳಲ್ಲಿ ಬೆಂಗಳೂರಿನ ಒಕ್ಕೂಟವು ಅಗ್ರಸ್ಥಾನ ಪಡೆದಿದೆ. ಇನ್ನು, ಕೋಲಾರ, ಹಾಸನ, ಮಂಡ್ಯದ ಮನ್ಮುಲ್ ನಂತರದ ಸ್ಥಾನ ಪಡೆದಿವೆ. ಮೈಸೂರು 6ನೇ ಸ್ಥಾನ ಪಡೆದರೆ, ಚಾಮರಾಜನಗರ 9ನೇ ಸ್ಥಾನದಲ್ಲಿದೆ. ಆ ಮೂಲಕ ಗೋವಿನಿಂದ ಗ್ರಾಹಕರವರೆಗೆ ಗುಣಮಟ್ಟದ ಶ್ರೇಷ್ಠತೆ ಎಂಬ ಧ್ಯೇಯ ವಾಕ್ಯವನ್ನು ನಂದಿನಿ ಸಾಕಾರಗೊಳಿಸುತ್ತಿದೆ.
ಕರ್ನಾಟಕ ಮಾತ್ರವಲ್ಲದೆ, ದೇಶಾದ್ಯಂತ ನಂದಿನಿ ಬ್ರ್ಯಾಂಡ್ ಉತ್ಪನ್ನಗಳು ದೇಶಾದ್ಯಂತ ಹೆಸರುವಾಸಿಯಾಗಿವೆ. ಆದರೆ, ರಾಜ್ಯದಲ್ಲಿಯೇ ಸರ್ಕಾರವು ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಬಿಡುಗಡೆ ಮಾಡದಿರುವುದು ಬೇಸರದ ಸಂಗತಿಯಾಗಿದೆ. ಹೌದು, ರಾಜ್ಯದಲ್ಲಿ 26 ಲಕ್ಷ ಹಾಲು ಉತ್ಪಾದಕರಿಗೆ ರಾಜ್ಯ ಸರ್ಕಾರವು 600 ಕೋಟಿ ರೂ.ಗಿಂತ ಅಧಿಕ ಮೊತ್ತದ ಪ್ರೋತ್ಸಾಹ ಧನವನ್ನು ಬಾಕಿ ಉಳಿಸಿಕೊಂಡಿದೆ.
ಕಳೆದ ಜೂನ್ ನಿಂದಲೂ ಪ್ರೋತ್ಸಾಹ ಧನ ಬಾಕಿ ಇರುವುದರಿಂದ ಹೈನುಗಾರಿಕೆಯನ್ನೇ ನಂಬಿದವರು ಕಷ್ಟಕ್ಕೆ ಸಿಲುಕಿದ್ದಾರೆ. ಇನ್ನಾದರೂ ರಾಜ್ಯ ಸರ್ಕಾರ ಇವರತ್ತ ಗಮನ ಹರಿಸಬೇಕಿದೆ. ಹೈನುಗಾರರಿಲ್ಲದೇ ನಂದಿನಿ ಇಲ್ಲ ಎಂಬುವುದನ್ನು ಅಂರಿತು ಅವರಿಗೆ ಸಲ್ಲಲೇಬೇಕಿರುವ ಪ್ರೋತ್ಸಾಹ ಧನವನ್ನು ವಿಳಂಬ ಮಾಡದೆ, ಶೀಘ್ರದಲ್ಲಿ ವಿಲೇವಾರಿ ಮಾಡಿ ಹೈನು ಉದ್ಯಮ ನೆಚ್ಚಿಕೊಂಡವರನ್ನು ಸಂಕಷ್ಟದಿಂದ ಪಾರು ಮಾಡಬೇಕಿದೆ.