ಮೈಸೂರು: ಇಲ್ಲಿನ ಇನ್ಪೋಸಿಸ್ ಕ್ಯಾಂಪಸ್ ನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದ್ದು, ಮತ್ತೆ ಕಾರ್ಯಾಚರಣೆ ಮುಂದುವರೆಸಲಾಗಿದೆ.
ಅರಣ್ಯ ಇಲಾಖೆಯ ಚಿರತೆ ಕಾರ್ಯ ಪಡೆಯ ಮೈಸೂರು ಪ್ರಾದೇಶಿಕ ವಲಯದ ಸಿಬ್ಬಂದಿಗಳಿಂದ ಕಾರ್ಯಾಚಣೆ ನಡೆಯುತ್ತಿದೆ. ಚಿರತೆಯ ಹೆಜ್ಜೆ ಗುರುತುಗಳನ್ನು ಆಧರಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಚಿರತೆ ಹಿಡಿಯುವುದಕ್ಕಾಗಿ ಹೆಚ್ಚುವರಿಯಾಗಿ 10 ಕ್ಯಾಮೆರಾ ಟ್ರ್ಯಾಪ್, ಒಂದು ಸಾಮಾನ್ಯ ಬೋನ್, ಮತ್ತೊಂದು
ಟ್ರ್ಯಾಪ್ ಬೋನ್ ಅಳವಡಿಸಲಾಗಿದೆ. ಅಲ್ಲದೇ, ಕ್ಯಾಮೆರಾ ಟ್ರ್ಯಾಪ್, ಡ್ರೋನ್ ಕ್ಯಾಮೆರಾ, ಕ್ಯಾಂಪಸ್ ಸಿಸಿ ಕ್ಯಾಮೆರಾಗಳ ಮೇಲೆ ನಿಗಾ ವಹಿಸಲಾಗಿದೆ. ಚಿರತೆ ಸೆರೆ ಹಿಡಿಯುವುದಕ್ಕಾಗಿ ಚಿರತೆ ಕಾರ್ಯಪಡೆಯ ತಂಡವೊಂದು ಕ್ಯಾಂಪಸ್ ನಲ್ಲೇ ಮೊಕ್ಕಾಂ ಹೂಡಿದೆ.
ಇನ್ಫೋಸಿಸ್ ಕ್ಯಾಂಪಸ್ ನಲ್ಲಿ ಚಿರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದಲೂ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ನೀಡಲಾಗಿದೆ. ಹೀಗಾಗಿ ಸಿಬ್ಬಂದಿಗಳು ವರ್ಕ್ ಫ್ರಮ್ ಹೋಮ್ ನಲ್ಲಿದ್ದಾರೆ. ಆದರೆ, ಕ್ಯಾಂಪಸ್ ಸುತ್ತಮುತ್ತಲಿನ ಜನರು ಮಾತ್ರ ಆತಂಕದಲ್ಲಿ ದಿನ ದೂಡುವಂತಾಗಿದೆ. ಹೀಗಾಗಿ ಆದಷ್ಟು ಬೇಗ ಚಿರತೆ ಸೆರೆ ಹಿಡಿಯುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.