ಬೆಂಗಳೂರು: ವಿಶ್ವವಿದ್ಯಾಲಯಗಳ ಯಡವಟ್ಟಿನಿಂದ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುವಂತಾಗುತ್ತಿದೆ.
ಬೆಂಗಳೂರು ವಿಶ್ವ ವಿದ್ಯಾಲಯ ಮಾಡಿರುವ ಯಡವಟ್ಟಿನಿಂದ ಪಾಸ್ ಆಗಬೇಕಾದ ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ. ಅಲ್ಲದೇ, ವಿದ್ಯಾರ್ಥಿಗಳು ರಿ ವ್ಯಾಲುವೇಷನ್ ಹಾಕಿದರೂ ಮತ್ತೆ ಫೇಲ್ ಆಗಿದ್ದಾರೆ. ಜ್ಞಾನಭಾರತಿ ಪರೀಕ್ಷಾ ವಿಭಾಗದ ಎಡವಟ್ಟಿನಿಂದಾಗಿ ಈ ರೀತಿ ಆಗುತ್ತಿದೆ ಎನ್ನಲಾಗಿದೆ.
ವಿಜಯನಗರ ಎಎಸ್ ಸಿ ಕಾಲೇಜಿನ ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿ ಪ್ರಜ್ವಲ್ ಮ್ಯಾನೇಜ್ ಮೆಂಟ್ ಅಕೌಂಟಿಂಗ್ ವಿಷಯ ಹೊರತುಪಡಿಸಿ ಇನ್ನುಳಿದ ವಿಷಯಗಳಲ್ಲಿ ಫಸ್ಟ್ ಕ್ಲಾಸ್ ನಲ್ಲಿ ಪಾಸಾಗಿದ್ದಾನೆ. ಒಂದು ವಿಷಯದಲ್ಲಿ ಬರಬೇಕಾಗಿದ್ದದ್ದು 40 ಅಂಕ. ಆದರೆ, ಕೇವಲ 12 ಅಂಕಗಳನ್ನು ಕೊಡಲಾಗಿದೆ. ಮರು ಮೌಲ್ಯಮಾಪನ ಮಾಡಿದರೂ ಕೇವಲ 13 ಅಂಕ ಬಂದಿದೆ. ವಿದ್ಯಾರ್ಥಿ ಫೋಟೋ ಕಾಪಿ ತರಿಸಿ ನೋಡಿದಾಗ ಮ್ಯಾನೇಜ್ ಮೆಂಟ್ ಅಕೌಂಟಿಂಗ್ 60 ಅಂಕದ ಪ್ರಶ್ನೆ ಪತ್ರಿಕೆ ಮೂರು ಸೆಕ್ಷನ್ ಗಳಲ್ಲಿ ಎರಡನೇ ಸೆಕ್ಷನ್ ನ ಮೂರು ಪ್ರಶ್ನೆಗೆ ಮೌಲ್ಯಮಾಪಕರು ಉತ್ತರ ಪರಿಗಣಿಸಿಲ್ಲ.
ಸೆಕ್ಷನ್ ಬಿ ತಲಾ 4 ಅಂಕಗಳ ಮೂರು ಉತ್ತರಕ್ಕೆ ಅಂಕ ನೀಡದೇ ನಿರ್ಲಕ್ಷ್ಯಿಸಿದ್ದಾರೆ. ಸೆಕ್ಷನ್ ಸಿ ಯ ಎರಡು ಪ್ರಶ್ನೆಗಳಿಗೆ ನಾಲ್ಕು ಅಂಕ ನೀಡಿದ್ದಾರೆ. ಇದನ್ನು ವಿದ್ಯಾರ್ಥಿ ಪ್ರಶ್ನಿಸಿದರೆ, ನಾಟ್ ಅಟೆಂಡೆಡ್ ಎಂದು ಬೆಂಗಳೂರು ವಿಶ್ವ ವಿದ್ಯಾಲಯ ಉತ್ತರಿಸಿದೆ. ಸದ್ಯ ವಿದ್ಯಾರ್ಥಿಯು ಫೋಟೋ ಕಾಪಿ ಹಿಡಿದು ನ್ಯಾಯ ಕೇಳುತ್ತಿದ್ದಾನೆ. ಈ ರೀತಿ ಬೇರೆ ವಿದ್ಯಾರ್ಥಿಗಳಿಗೂ ಅನ್ಯಾಯವಾಗಿರಬಹುದು ಎಂದು ವಿದ್ಯಾರ್ಥಿಗಳು ಮಾತನಾಡಿಕೊಳ್ಳುತ್ತಿದ್ದಾರೆ.