ಬೆಂಗಳೂರು: ರಾಜ್ಯದಲ್ಲಿ (Karnataka) ಮುಂದಿನ ಮೂರು ದಿನಗಳ ಕಾಲ ಹಲವು ಜಿಲ್ಲೆಗಳಿಗೆ ಶೀತಗಾಳಿ (Cold Wave) ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಕರಾವಳಿ, ಉತ್ತರ ಒಳನಾಡು, ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಶೀತಗಾಳಿಯ ಎಚ್ಚರಿಕೆ ನೀಡಲಾಗಿದೆ. ಉತ್ತರ ಕನ್ನಡ, ಬೆಳಗಾವಿ, ಬೀದರ್, ವಿಜಯಪುರ, ಕಲಬುರಗಿ, ಹಾವೇರಿ, ರಾಯಚೂರು, ಜಿಲ್ಲೆಗಳಲ್ಲಿ ಶೀತಗಾಳಿ ಇರಲಿದೆ.
ರಾಜ್ಯಾದ್ಯಂತ ಚುಮುಚುಮು ಚಳಿ ಹೆಚ್ಚಾಗಿದ್ದು, ಕೆಲವೆಡೆ 15 ಡಿಗ್ರಿಗಿಂತ ಕೆಳಗೆ ತಾಪಮಾನ ಕುಸಿದಿದೆ. ಮುಂದಿನ 3 ದಿನಗಳಲ್ಲಿ ತಾಪಮಾನ ಇನ್ನಷ್ಟು ಕುಸಿಯುವ ಸಾಧ್ಯತೆ ಇದೆ. ರಾಜ್ಯಾದ್ಯಂತ ಕನಿಷ್ಠ ಉಷ್ಣಾಂಶ 2 ರಿಂದ 4 ಡಿಗ್ರಿ ಸೆಲ್ಸಿಯಸ್ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ವಿಜಯಪುರ- 10.6 ಡಿ.ಸೆ, ಚಿಕ್ಕಮಗಳೂರು- 10.2 ಡಿ.ಸೆ, ಚಿಂತಾಮಣಿ- 10.8 ಡಿ.ಸೆ, ಬೀದರ್ – 11 ಡಿ.ಸೆ, ದಾವಣಗೆರೆ- 11 ಡಿ.ಸೆ, ಬೆಳಗಾವಿ ಏರ್ ಪೋರ್ಟ್- 11.4 ಡಿ.ಸೆ ದಾಖಲಾಗಿದೆ.