ರೈತರ ಬೇಡಿಕೆಗಳಿಗೆ ಸ್ಪಂದಿಸದ ಕೇಂದ್ರ ಸರ್ಕಾರದ ಧೋರಣಿ ಖಂಡಿಸಿ ಹಾಗೂ ರೈತರ ಪರ ಆಮರಣ ಉಪವಾಸ ಕೈಗೊಂಡಿರುವ ಜಗಜಿತ್ ಸಿಂಗ್ ದಲ್ಲೈವಾಲಾ ಹೋರಾಟ ಬೆಂಬಲಿಸಿ ಜ. 4ರಂದು ಬೆಳಗ್ಗೆ ವಿಧಾನಸೌಧದ ಬಳಿ ಇರುವ ಮಹಾತ್ಮ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ರೈತ ಮುಖಂಡರು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ಕೇಂದ್ರ ಸರ್ಕಾರ ರೈತರಿಗೆ ಹಲವು ಭರವಸೆ ನೀಡಿ, ಇದುವರೆಗೂ ಒಂದೇ ಒಂದು ಭರವಸೆ ಈಡೇರಿಸುವ ಕೆಲಸ ಮಾಡಿಲ್ಲ. ಹೀಗಾಗಿ ಕೇಂದ್ರ ಸರ್ಕಾರದ ಧೋರಣೆ ವಿರೋಧಿಸಿ ನ. 26ರಿಂದ ಇಲ್ಲಿಯವರೆಗೂ ಹಿರಿಯ ರೈತ ಮುಖಂಡ ಜಗಜಿತ್ ಸಿಂಗ್ ದಲ್ಲೈವಾಲಾ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ಅವರ ಉಪವಾಸದಿಂದ ಆರೋಗ್ಯ ತೀರಾ ಹದಗೆಟ್ಟಿತ್ತು. ಈ ಹಿನ್ನೆಲೆಯಲ್ಲಿ ದೇಶದ ಸರ್ವೋಚ್ಛ ನ್ಯಾಯಾಲಯವು ಇತ್ತೀಚೆಗೆ ಪಂಜಾಬ್ ಪಕ್ಕದಲ್ಲಿರುವ ಖನೌರಿ ಬಾರ್ಡರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುವಂತೆ ಮಾಡಿದೆ.
ಈ ರಾಷ್ಟ್ರದ ರೈತ ಸಂಕುಲಕ್ಕಾಗಿ ಜಗಜಿತ್ ದಲ್ಲೈವಾಲ ತಮ್ಮ ಪ್ರಾಣ ಲೆಕ್ಕಿಸದೆ ಹೋರಾಟ ನಡೆಸುತ್ತಿದ್ದಾರೆ.
ಹೀಗಾಗಿ ಅವರು ಇಟ್ಟಿರುವ ಬೇಡಿಕೆಯಾದ ಸಮಸ್ತ ರೈತರಿಗೆ ಬೆಳೆಗಳಿಗಳಿಗೆ ಕಾನೂನು ಖಾತರಿ ಜೊತೆಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಪಡಿಸಲು ಸರ್ಕಾರವನ್ನು ಒಕ್ಕೂರಲಿನಿಂದ ಒತ್ತಾಯಿಸುವುದಕ್ಕಾಗಿ ಈ ಹೋರಾಟ ಹಮ್ಮಿಕೊಳ್ಳಲಾಗಿದೆ. ಈ ಹೋರಾಟಕ್ಕೆ ಆಳಂದ ಶಾಸಕ ಬಿ.ಆರ್. ಪಾಟೀಲ್, ರೈತ ಮುಖಂಡರಾದ ಮೋಹನ್ ಕೊಂಡಜ್ಜಿ, ಅಲಿಬಾಬಾ, ವೀರಸಂಗಯ್ಯ, ಆರ್. ದಯಾನಂದ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.