ಬೆಂಗಳೂರು: ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಸೇರಿದಂತೆ ಪಕ್ಷದ ವಿವಿಧ ಹಂತಗಳ ಪದಾಧಿಕಾರಿಗಳ ಆಯ್ಕೆಗೆ ರಾಜ್ಯದಲ್ಲಿ ಚುನಾವಣೆ ನಡೆಸಲು ಹೈಕಮಾಂಡ್ ನಿರ್ಧರಿಸಿದ್ದು, ಬಿ.ವೈ. ವಿಜಯೇಂದ್ರಗೆ ಸಂಕಷ್ಟ ಶುರುವಾದಂತಾಗಿದೆ.
ವಿಜಯೇಂದ್ರ ರಾಜ್ಯಾಧ್ಯಕ್ಷ ಹುದ್ದೆಯಲ್ಲಿ ಮುಂದುವರೆಯಬೇಕಾದರೆ ಚುನಾವಣೆ ಎದುರಿಸಬೇಕಾಗುತ್ತದೆ. ಈಗಾಗಲೇ ರಾಜ್ಯಕ್ಕೆ ಶಿವರಾಜ್ ಸಿಂಗ್ ಚವ್ಹಾಣ್ ಅವರನ್ನು ಮೇಲ್ವಿಚಾರಕರಾಗಿ ನೇಮಕ ಮಾಡಲಾಗಿದೆ. ಸದ್ಯ ಬೂತ್‌ಮಟ್ಟದ ಚುನಾವಣೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಮಂಡಲ, ಜಿಲ್ಲಾ ಹಾಗೂ ರಾಜ್ಯ ಘಟಕಕ್ಕೂ ಚುನಾವಣೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಲೋಕಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಪದಾಧಿಕಾರಿಗಳ ಆಯ್ಕೆ ಚುನಾವಣೆಯನ್ನು ಒಂದು ವರ್ಷ ಮುಂದೂಡಲಾಗಿತ್ತು. ಹಿಂದಿನ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಬಳಿಕ ಹೈಕಮಾಂಡ್ ತೀರ್ಮಾನದಂತೆ ಬಿ.ವೈ. ವಿಜಯೇಂದ್ರರನ್ನು ನೇಮಕ ಮಾಡಲಾಗಿತ್ತು. ವಿಜಯೇಂದ್ರ ಅಧ್ಯಕ್ಷರಾಗಿ ಒಂದು ವರ್ಷ ಒಂದು ತಿಂಗಳು ಕಳೆದಿವೆ.
ರಾಜ್ಯದಲ್ಲಿ ಮುಂದಿನ ಬಿಜೆಪಿ ರಾಜ್ಯಾಧ್ಯಕ್ಷರು ಯಾರು ಎಂಬುವುದನ್ನು ಬಿಜೆಪಿ ಜಿಲ್ಲಾ ಘಟಕಗಳ ಅಧ್ಯಕ್ಷರು ನಿರ್ಧಾರ ಮಾಡುತ್ತಾರೆ. ಕರ್ನಾಟಕದಲ್ಲಿ 37 ಜಿಲ್ಲಾ ಘಟಕಗಳಿವೆ. ಜಿಲ್ಲಾಧ್ಯಕ್ಷರುಗಳ ಬೆಂಬಲವು ವಿಜಯೇಂದ್ರ ಅವರಿಗೆ ಇದ್ದು, ಚುನಾವಣೆ ನಡೆದರೆ ಮತ್ತೆ ಅಧ್ಯಕ್ಷರಾಗಬಹುದು ಎನ್ನಲಾಗುತ್ತಿದೆ.