ನಮ್ಮ ಯಾತ್ರಿ ಆಟೋ ಚಾಲಕನಿಂದ ಮಹಿಳೆಯೊಬ್ಬರು ಕಿರುಕುಳಕ್ಕೆ ಒಳಗಾಗಿರುವ ಆರೋಪವೊಂದು ರಾಜಧಾನಿಯಲ್ಲಿ ಕೇಳಿ ಬಂದಿದೆ.
ಕುಡಿದ ನಶೆಯಲ್ಲಿ ಆಟೋ ಚಾಲನೆ ಮಾಡಿದ್ದಲ್ಲದೆ, ಚಲಿಸುತ್ತಿದ್ದ ಆಟೋದಿಂದ ಜಂಪ್ ಮಾಡುವಂತೆ ಮಹಿಳೆಗೆ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಇದರಿಂದಾಗಿ ಮಹಿಳೆ ಹೈರಾಣಾಗಿ ಹೋಗಿ, ಈಗ ಚಾಲಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಯುವತಿ ಬುಕ್ ಮಾಡಿದ್ದ ಪ್ರದೇಶವೇ ಒಂದಾಗಿದ್ದರೆ, ಆತ ಬೇರೆ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದ ಎನ್ನಲಾಗಿದೆ. ಮಹಿಳೆಯೊಬ್ಬರು ಕೆಲಸದ ನಿಮಿತ್ತವಾಗಿ ಹೊರಮಾವಿನಿಂದ ಥಣಿಸಂದ್ರಕ್ಕೆ ಆಟೋ ಬುಕ್ ಮಾಡಿದ್ದಾರೆ. ಆದರೆ, ಆಟೋ ಚಾಲಕ ಹೆಬ್ಬಾಳದತ್ತ ಆಟೋ ತಿರುಗಿಸಿದ್ದಾನೆ. ಆಗ ಅದನ್ನು ಪ್ರಶ್ನಿಸಿದ್ದಕ್ಕೆ ಬಾಯಿಗೆ ಬಂದ ಹಾಗೆ ಮಾತನಾಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.

ಬೇಕಾದರೆ ಆಟೋದಿಂದ ಜಂಪ್ ಮಾಡು, ಆಟೋ ನಿಲ್ಲಿಸುವುದಿಲ್ಲ ಎಂದು ಕಿರಿಕ್ ಮಾಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಇಂತಹ ಚಾಲಕರಿಂದ ಆಪ್ ಮೂಲಕ ಹೇಗೆ ರಕ್ಷಣೆ ಸಾಧ್ಯ ಎಂದು ಪ್ರಶ್ನಿಸಿರುವ ಮಹಿಳೆ, ಆಟೋ ಚಾಲಕನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪೊಲೀಸರಲ್ಲಿ ಮನವಿ ಮಾಡಿದ್ದಾರೆ