ಪಿಎಸ್ ಐ ಹಗರಣ, ಪಿಡಿಒ ನೇಮಕಾತಿಗಳಂತಹ ಹಗರಣಗಳು ರಾಜ್ಯವನ್ನೇ ಬಾಧಿಸುತ್ತಿವೆ. ಇಂದು ಕೆಎಎಸ್ ಪರೀಕ್ಷೆ ಪಾಸು ಮಾಡಿ ಬಂದವರನ್ನು ಸಹ ಅನುಮಾನದಿಂದ ನೋಡುವಂತಾಗಿದೆ. ನುಂಗುಬಾಕ ಮಧ್ಯವರ್ತಿಗಳು ಅಭ್ಯರ್ಥಿಗಳಿಗೆ ಸರ್ಕಾರಿ ಉದ್ಯೋಗದ ಆಮಿಷವೊಡ್ಡಿ ಲಕ್ಷಾಂತರ ರೂ. ಹಣ ಪೀಕುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಸರ್ಕಾರಿ ಉದ್ಯೋಗ ಕೊಡಿಸುವ ಆಮಿಷವೊಡ್ಡಿ, ಲಕ್ಷಾಂತರ ರೂ. ಹಣ ಲಪಟಾಯಿಸುತ್ತಿದ್ದ ರೈಲ್ವೆ ಅಧಿಕಾರಿ ಗೋವಿಂದರಾಜು ಎಂಬಾತನನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿ, ಕೃಷ್ಣನ ಜನ್ಮಸ್ಥಾನಕ್ಕೆ ಕಳುಹಿಸಿದ್ದಾರೆ. ಅರ್ಥಾತ್ ಭ್ರಷ್ಟ ಅಧಿಕಾರಿ ಈಗ ಜೈಲುಪಾಲು!!
ಹೌದು, ಮೆಜೆಸ್ಟಿಕ್ ಬಳಿಯ ನೈರುತ್ಯ ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದ, ಚೀಫ್ ರೈಲ್ವೆ ಟಿಕೆಟ್ ಇನ್ಸ್ ಪೆಕ್ಟರ್ ಆಗಿರುವ ಗೋವಿಂದರಾಜು ಎಂಬಾತನೇ ಲಂಚಬಾಕತನದ ಪರಮಾವಧಿಯಿಂದ ಜೈಲುಪಾಲಾದಾತ! ಈತ ಕಾಂಪಿಟೇಟಿವ್ ಎಕ್ಸಾಮ್ ಬರೆಯುವ ಅಭ್ಯರ್ಥಿಗಳನ್ನೇ ಟಾರ್ಗೆಟ್ ಮಾಡುತ್ತಿದ್ದ. ನಂತರ ಅವರ ಮನೆಗಳಿಗೆ ನೇರವಾಗಿ ತೆರಳಿ ಕೆಲಸ ಕೊಡಿಸುವ, ಪಾಸು ಮಾಡಿಸುವ ಆಸೆ ತೋರಿಸಿ ಪಿಡಿಒ ಹುದ್ದೆಗೆ 25 ಲಕ್ಷ ರೂ. ಹಾಗೂ ಕೆಎಎಸ್ ಹುದ್ದೆಗೆ 50 ಲಕ್ಷ ರೂ. ಎಂಬಂತೆ ರೇಟ್ ಫಿಕ್ಸ್ ಮಾಡಿ ಪರೀಕ್ಷಾರ್ಥಿಗಳ ತಲೆ ಕೆಡಿಸುತ್ತಾ ಲಕ್ಷ ಲಕ್ಷ ಪೀಕುತ್ತಿದ್ದ ಎಂಬುವುದು ಪೊಲೀಸ್ ಮೂಲಗಳ ಮಾಹಿತಿ.
ಹೌದು! ಆರೋಪಿ ಗೋವಿಂದರಾಜುನ್ನು ಪೊಲೀಸರು ಸಿನಿಮಾ ಸ್ಟೈಲಲ್ಲಿ ಬಂಧಿಸಿದ್ದಾರೆ. ವಿಜಯನಗರ ನಿವಾಸಿ ರಮೇಶ್ ಎಂಬುವರ ಪುತ್ರಿಗೆ ಕೆಎಎಸ್ ಹುದ್ದೆ ಕೊಡಿಸುವುದಾಗಿ ಗೋವಿಂದರಾಜು ಭರವಸೆ ನೀಡಿದ್ದ. ಈ ಕುರಿತು ರಮೇಶ್ ಜತೆ ಚರ್ಚಿಸಲು ಡಿಸೆಂಬರ್ 28ರಂದು ರಾತ್ರಿ ಅವರ ಮನೆಗೆ ತೆರಳಿದ್ದ. ಈ ಮಾಹಿತಿ ಆಧರಿಸಿ ವಿಜಯನಗರ ಪೊಲೀಸರು ಗೋವಿಂದರಾಜುನನ್ನು ಹಿಂಬಾಲಿಸಿ ವಶಕ್ಕೆ ಪಡೆದಿದ್ದರು. ಹೆಚ್ಚಿನ ವಿಚಾರಣೆ ನಡೆಸಿದಾಗ ಉದ್ಯೋಗಾಧಿಕಾಂಕ್ಷಿಗಳಿಂದ ಹಣ ಪಡೆದು ವಂಚಿಸುತ್ತಿರುವ ಸಂಗತಿ ಬಯಲಾಗಿದೆ. ಹಾಗಾಗಿ, ಈತನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿರುವ ಪೊಲೀಸರು, ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ನಾಲ್ಕು ದಿನ ಕಸ್ಟಡಿಗೆ ಪಡೆದಿದ್ದಾರೆ.
ಜಾಬ್ ಕೊಡಿಸಿ, ಲಂಚ ಪಡೆಯುವ ದಂಧೆಯಲ್ಲೇ ತೊಡಗಿರುವ ಆರೋಪಿಯು ಅಭ್ಯರ್ಥಿಗಳಿಗೆ ಹಲವು ಸೂಚನೆ ನೀಡುತ್ತಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸರಕಾರಿ ಹುದ್ದೆಗಾಗಿ ಹಣ ಕೊಡಲು ಒಪ್ಪಿ ಲಿಖಿತ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳಿಗೆ ಒಎಂಆರ್ ಶೀಟ್‌ನಲ್ಲಿ ಗೊತ್ತಿರುವ ಪ್ರಶ್ನೆಗಳಿಗೆ ಮಾತ್ರ ಉತ್ತರ ತುಂಬಿಸಬೇಕು. ಗೊತ್ತಿಲ್ಲದ ಪ್ರಶ್ನೆಗಳನ್ನು ಖಾಲಿ ಬಿಟ್ಟು ಬರುವಂತೆ ಸೂಚಿಸಿದ್ದ. ಇದಾದ ಬಳಿಕ ಒಎಂಆರ್ ಶೀಟ್‌ನಲ್ಲಿ ಸರಿಯಾದ ಉತ್ತರವನ್ನು ಮಧ್ಯವರ್ತಿಗಳಿಂದ ತುಂಬಿಸಿ ಪರೀಕ್ಷೆ ಪಾಸ್ ಮಾಡಿಸುವುದಾಗಿ ಗೋವಿಂದರಾಜು ಹೇಳಿ ನಂಬಿಸಿದ್ದ ಎಂಬುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸ್ ಬೈಟ್…
ಕೆಎಎಸ್, ಪಿಡಿಒ, ಗ್ರಾಮಲೆಕ್ಕಾಧಿಕಾರಿ ಸೇರಿ ಇತ್ತೀಚೆಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದವರನ್ನು ಗುರಿಯಾಗಿಸಿ, ಲಂಚಕ್ಕೆ ಬೇಡಿಕೆ ಇಡುತ್ತಿದ್ದ ಗೋವಿಂದರಾಜುವಿನಿಂದ ಪೊಲೀಸರು ನಾಲ್ಕು ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಹಾಗೆಯೇ, 46 ಅಭ್ಯರ್ಥಿಗಳ ಹೆಸರು, ಚೆಕ್ ವಿವರಗಳು ಕೂಡ ದೊರೆತಿವೆ. ಅಕ್ರಮದಲ್ಲಿ ಶಾಮೀಲಾಗಿರುವ ಅಭ್ಯರ್ಥಿಗಳು ಹಾಗೂ ಮಧ್ಯವರ್ತಿಗಳ ವಿವರಕ್ಕಾಗಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಗೋವಿಂದರಾಜು ಎಂಬ ಖತರ್ನಾಕ್ ವ್ಯಕ್ತಿಯ ಕರ್ಮಕಾಂಡ ಇಲ್ಲಿಗೇ ಮುಗಿಯಲ್ಲ. ಈ ಹಿಂದೆ 2013ರಲ್ಲಿಯೂ ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ಈ ಗೋವಿಂದರಾಜು ಪಾತ್ರ ಕಂಡುಬಂದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ವಶಕ್ಕೆ ಪಡೆದು, ಡ್ರಿಲ್ ಮಾಡಿದ್ದರು. ಒಟ್ಟಿನಲ್ಲಿ, ವಿದ್ಯಾರ್ಥಿಗಳಿಗೆ, ಸಮಾಜಕ್ಕೆ ಮಾರಕವಾಗಿರುವ ಇಂತಹ ಖದೀಮರನ್ನು ಮಟ್ಟಹಾಕಬೇಕು. ಹಾಗೆಯೇ ಅಭ್ಯರ್ಥಿಗಳು ಹಾಗೂ ಪೋಷಕರು ಕೂಡ ಉದ್ಯೋಗದ ಆಸೆಗೆ ಇಂತಹ ಖದೀಮರ ಜಾಲಕ್ಕೆ ಸಿಲುಕಬಾರದು.